
Published By: Kala Karanataka
Last Updated Date: 13-Jan-2023
" ನಾಟಕವೆಂದರೆ ಹೀಗಿರಬೇಕು..."
·
#ಹಕ್ಕಿಕಥೆ
********
#ಕೊಡಚಾದ್ರಿ ಯನ್ನು ಹತ್ತಿಳಿಯಲು #ರೋಪ್_ವೇ ನಿರ್ಮಿಸುವ ಮಾತುಗಳು ಬಂದಾಗ ಸಿಡಿದೆದ್ದವರನ್ನು ಅಭಿವೃದ್ಧಿಯ ವಿರೋಧಿಗಳೆಂದು ವ್ಯಾಖ್ಯಾನಿಸಿದವರ ನಡುವೆ ಹೋರಾಟವನ್ನು ಜೀವಂತವಾಗಿರಿಸಿದ "ಪರಿಸರ ಪ್ರಿಯ"ರಿಗಿದ್ದ ಸ್ವಾರ್ಥವಾದರೂ ಏನು ಎಂದು ಅಚ್ಚರಿಗೊಳ್ಳುತಿದ್ದೆ! ಶಿವಮೊಗ್ಗ ರಂಗಾಯಣದ ಮೂಲಕ ನಿರ್ಮಾಣಗೊಂಡ ನಾಟಕ #ಹಕ್ಕಿ_ಕಥೆ ಯನ್ನು ತೆಕ್ಕಟ್ಟೆ ಪ್ರಯೋಗದಲ್ಲಿ ನೋಡಿದ ಬಳಿಕ ಸಹ್ಯಾದ್ರಿ ಬೆಟ್ಟ ಸಾಲುಗಳು ಎದುರಿಸಿದ ಕಂಟಕವನ್ನೇ ಕೊಡಚಾದ್ರಿಯೂ ಎದುರಿಸಬೇಕಾದ ಅನಿವಾರ್ಯ ಸನ್ನಿವೇಶವನ್ನು ರೂಪುಗೊಳಿಸುವಲ್ಲಿ ನಮ್ಮ "ಅಭಿವೃದ್ಧಿಯ ಹರಿಕಾರ'ರು ಶತ ಪ್ರಯತ್ನದಲ್ಲಿರಬಹುದೆಂದು ಸರಳವಾಗಿ ಅರ್ಥ ಮಾಡಿಕೊಂಡೆ.
****
ನಾಟಕವೊಂದು ಏನೆಲ್ಲವನ್ನು ಹೇಳಬಹುದು ಮತ್ತು ಹೇಗೆಲ್ಲಾ ಹೇಳಬಹುದು ಎಂದು ಯಾರಾದರೂ ಕೇಳಿದರೆ ನಾನು #ಹಕ್ಕಿಕಥೆ ಯತ್ತೃ ಬೆರಳು ತೋರಿಸುವೆ!
ಪ್ರಕೃತಿಯ ಭಾಗವೇ ಆಗಿರುವ ಮನುಷ್ಯರು ಸ್ವತಃ ಅದರ ನಾಶಕ್ಕಾಗಿ ತೊಡಗಿಸಿಕೊಂಡಿರುವುದನ್ನು ನಿರೂಪಿಸಿರುವ ಈ ಕಥಾನಕವನ್ನು ಬೆರಗುಗಣ್ಣಿನಿಂದಲೇ ನೋಡಿದೆ! ನಿರ್ದೇಶಕರ ಚಾಕಚಕ್ಯತೆಯ ಲಾಲಿತ್ಯವನ್ನು ಮತ್ತಷ್ಟು ಸ್ಫುಟಗೊಳಿಸುವ ಬೊಂಬೆಗಳ ಲೀಲಾಜಾಲದ ಚಲನೆ ಜೊತೆಗೆ ಪಾತ್ರಧಾರಿಗಳ ಮಿಂಚಿನಂತಹ ನಿರ್ವಹಣೆ ಇಡೀ ನಾಟಕವನ್ನು ಆಪ್ತವಾಗಿ ಎದೆಗಿಳಿಸುವ ಪರಿಯಂತೂ ರೋಮಾಂಚಕ.
ಬೊಂಬೆಗಳನ್ನು ಇಷ್ಟೊಂದು ನಾಜೂಕಾಗಿ ಮತ್ತು ಅರ್ಥಪೂರ್ಣವಾಗಿ ಬಳಸಿರುವುದನ್ನು ಮೊದಲ ಬಾರಿಗೆ ನೋಡಿದೆ. ಪೂರಕವಾಗಿ ಭಾವನಾತ್ಮಕವಾದ ಸಂಗೀತ-ಗೀತಧಾರೆಗೆ ಶರಣಾದೆ.ಚಂಡೆಯನ್ನು ಈ ರೀತಿ ಪ್ರತೀ ಸನ್ನಿವೇಶದ ತೀವ್ರತೆಯನ್ನು ಪ್ರತಿಧ್ವನಿಸುವಂತೆ ಬಳಸಿದ ಶೈಲಿಯಂತೂ ಮೈ ನವಿರೇಳಿಸಿತು.
ಇದು ಕೇವಲ ಹಕ್ಕಿಗಳ ಕಥೆಯೆನಿಸಲಿಲ್ಲ ನನಗೆ! ತನ್ನ ಸ್ವಾರ್ಥಕ್ಕಾಗಿ ಇಡೀ ಭೂಮಿಯನ್ನು ದುರ್ಬಳಕೆ ಮಾಡಿಕೊಂಡ ಬಳಿಕ ಎಲ್ಲವೂ ವಿಷಮಯವಾಗಿ, ನಿಲ್ಲಲು ನೆಲೆಯಿಲ್ಲದ ದಿನಗಳಿಗೆ ಒಡ್ಡಿಕೊಂಡಿರುವ ಮನುಷ್ಯನ ಕಥೆಯೂ ಇದೇ ಆದೀತು. ನಾಟಕದ ಪ್ರತಿ ದೃಶ್ಯವೂ ನೀಡಿದ ಅನುಭವಗಳು ಹಾರ್ದಿಕವಾಗಿ ಬಹುಕಾಲ ನೆನಪಿನಲ್ಲಿ ಉಳಿಯುವುದಲ್ಲದೆ ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ನಮ್ಮ ಜವಾಬ್ದಾರಿಯನ್ನೂ ನೆನಪಿಸುತ್ತದೆ.
--ರಮೇಶ್ ಗುಲ್ವಾಡಿ
ಚಿಂತನ ರಂಗ ಅಧ್ಯಯನ ಕೇಂದ್ರ.



