Published By: Kala Karanataka
Last Updated Date: 15-Aug-2024
" ಮನರಂಜಿಸುವ ಕಲಾಕೃತಿಗಳು"
ಮನರಂಜಿಸುವ ಕಲಾಕೃತಿಗಳು, ದಿ 12-8-2024ರಿಂದ ಬೆಂಗಳೂರಿನ ಕರ್ನಾಟಕ ಚಿತ್ರ ಕಲಾ ಪರಿಷತ್ ನ ಮೂರು ಮತ್ತು ನಾಲ್ಕನೇ ನಂಬರಿನ ಗ್ಯಾಲರಿಗಳಲ್ಲಿ ವಿಶ್ವನಾಥ ಹೆಗಡೆ ಎಂಬ ದೃಶ್ಯ ಕಲಾವಿದರ ಕಲಾಕೃತಿಗಳು 'ಗ್ಲಿಂಪ್ಸ'ಶೀರ್ಷಿಕೆಯಡಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕ್ಯಾನವಾಸ್ ಮೇಲೆ ತೈಲವರ್ಣದಿಂದ ರಚಿಸಿದ ಕಲಾಕೃತಿಗಳು ಕೆಲವು, ಬಹುಪಾಲು ಕಾರ್ಡ್ ಬೋರ್ಡ್ ಮೇಲೆ ಕ್ಯಾನವಾಸ್ ಅಂಟಿಸಿ ಅದರ ಮೇಲೆ ದಾರ ಅಳವಡಿಸಿ ರೂಪಿಸಿದ ಕಲಾಕೃತಿಗಳು ,ಕೆಲವು ಕ್ಯಾನವಾಸ್ ಮೇಲೆ ವಾಲ್ ಎಮಲ್ಶನ್ ಬಣ್ಣ ಬಳಸಿ ರಚಿಸಿದವುಗಳು. ಸುಮಾರು 40ಕಲಾಕೃತಿಗಳು ಇಲ್ಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಕೆಲವು 24×24ಇಂಚು ಅಳತೆಯವಾದರೆ,ಇನ್ನು ಕೆಲವು 48×96ಇಂಚು ಅಳತೆಯವು,ಮತ್ತೆ ಕೆಲವು 48×48 ಇಂಚು ಅಳತೆಯವು.
ಮನರಂಜಿಸುವ ಕಲಾಕೃತಿಗಳಿವು. ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು ,ದೋಸೆ,ಅಳತೆಯ ಮಾಪನಗಳು ಇವೇ ಮೊದಲಾದ ವಿಷಯಗಳನ್ನು ಆಧರಿಸಿ ರಚಿಸಿದ ಕಲಾಕೃತಿಗಳು ಇಲ್ಲಿ ಪ್ರದರ್ಶನ ಕಾಣುತ್ತಿವೆ. ಕಾರ್ಡ್ ಬೋರ್ಡ್ ಮೇಲೆ ಕ್ಯಾನವಾಸ್ ಅಂಟಿಸಿ ಖಾದಿ ನೂಲಿನ ಬಟ್ಟೆ/ಖಾದಿ ನೂಲು ಹೊಂದಿಸಿ ರಚಿಸಿದ ಕಲಾಕೃತಿಗಳು ಅವುಗಳಲ್ಲಿನ ಕಣ್ಣಿಗೆ ರಾಚುವ ಬಣ್ಣಗಾರಿಕೆ ಮತ್ತು ನೋಟಕ್ಕೆ ದೂರದಿಂದಲೇ ಗೋಚರವಾಗಬಲ್ಲ ಟೆಕ್ಸಚರ್ ನಿರ್ಮಿತಿಯಿಂದ ಗಮನಸೆಳೆಯುತ್ತವೆ.
ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಲಾವಿದ ಹುದ್ದೆ ಗಿಟ್ಟಿಸಿಕೊಂಡು ಬೆಂಗಳೂರು ನಿವಾಸಿಯಾಗಿರುವ ವಿಶ್ವನಾಥ ಹೆಗಡೆಯವರು ಮೂಲತಃ ಉ.ಕ ಜಿಲ್ಲೆಯ ಸಿರ್ಸಿಯ ಹಳೇಹಳ್ಳ ಎಂಬ ಹಳ್ಳಿಯವರು.ದಾವಣಗೆರೆಯ ಲಲಿತಕಲಾ ಶಾಲೆ(ಈಗಿನ ಯುನಿವರ್ಸಿಟಿ ಕಾಲೇಜ್ ಆಫ್ ವಿಸ್ಯುವಲ್ ಆರ್ಟ್ ದಾವಣಗೆರೆ)ಯಲ್ಲಿ ಚಿತ್ರಕಲಾ ಡಿಪ್ಲೋಮಾ ಮುಗಿಸಿ, ನಂತರ ಕಲಬುರಗಿಯ ಎಂ.ಎಂ.ಕೆ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್ ಅಭ್ಯಸಿಸಿ, ತದನಂತರ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರು ಇದರ ಲಲಿತಕಲಾ ಕಾಲೇಜಿನಲ್ಲಿ ಚಿತ್ರಕಲಾ ಸ್ನಾತಕೊತ್ತರ ಪದವಿ ಅಧ್ಯಯನ ಮಾಡಿದವರು.
ಅಕಾಡೆಮಿಗಳ ಸ್ಪರ್ಧೆ/ಪ್ರದರ್ಶನ ,ಸಂಸ್ಥೆಗಳ ಕಲಾ ಪ್ರದರ್ಶನ/ಸ್ಪರ್ಧೆ ಇವುಗಳಲ್ಲಿ ಭಾಗವಹಿಸಿ ,ಕಲಾಕೃತಿ ಪ್ರದರ್ಶಿಸಿ ಮಿಂಚಬೇಕೆಂಬ ಹಪಹಪಿ ಇಲ್ಲದ ವಿಶ್ವನಾಥ ಹೆಗಡೆ ,ಆ ಕಾರಣದಿಂದ ತಮ್ಮ ಕಲಾಕೃತಿಗಳ ಸೋಲೋ ಶೋ ಮಾಡಿದ್ದು ಈಗಲೇ ಪ್ರಪ್ರಥಮದ್ದೇನೋ.ಅಲ್ಲದೆ ಸಮೂಹ ಕಲಾಪ್ರದರ್ಶನಗಳಲ್ಲೂ ಕೂಡ ಭಾಗಿಯಾದುದು ತೀರಾ ಕಡಿಮೆ.
ಬಾಳನೌಕೆಯನ್ನು ಸುಖಮಯವಾಗಿ ಸಾಗಿಸಿಕೊಂಡು ಹೋಗುವ ತುರ್ತಿಗೆ ಒಳಗಾಗಿ ಕಲಾವಿದನೆಂಬ ನೌಕರಿಯನ್ನು ಕಾರ್ಪೊರೇಟ್ ವಲಯದಲ್ಲಿ ಮಾಡುತ್ತಲೇ ಅಂತರಂಗದಲ್ಲಿ 'ನಿಜ ಕಲಾವಿದ'ನನ್ನು ಜೀವಂತವಾಗಿ ಇರಿಸಿಕೊಂಡಿರುವ ಅನೇಕ ಕಲಾಪ್ರತಿಭೆಗಳ ಸಾಲಿನಲ್ಲಿ ಸೇರತಕ್ಕವರು ವಿಶ್ವನಾಥ ಹೆಗಡೆ.
ಈ ಕಲಾಪ್ರದರ್ಶನ ದಿ18.8.2024 ರವರೆಗೂ ನಡೆಯಲಿದೆ.
ತಮ್ಮ ನೌಕರಿ ಬದುಕಿನ ನಡುವೆ ಆಗಾಗ ಬಿಡುವು ಮಾಡಿಕೊಂಡು ತಮ್ಮೊಳಗಿನ ಭಾವನೆಗಳಿಗೆ ಕಲಾತ್ಮಕ ರೂಪು ನೀಡುವ ಕೆಲಸವನ್ನು ಮಾಡುತ್ತಾ,ಅವುಗಳನ್ನು ಪ್ರದರ್ಶಿಸುವ ಧೈರ್ಯ ಮತ್ತು ಉತ್ಸಾಹವನ್ನು ವಿಶ್ವನಾಥ ಹೆಗಡೆಯವರು ಕಾರ್ಯ ರೂಪದಲ್ಲಿ ತರುತ್ತಾ ಬಂದುದೇ ಆದರೆ ಅವರಿಗೆ ದೃಶ್ಯ ಕಲಾ ವಲಯದಲ್ಲಿ ಗುರ್ತಿಸಿಕೊಳ್ಳುವ ಎಲ್ಲಾ ಅವಕಾಶಗಳೂ ಮುಕ್ತವಾಗಿರುತ್ತವೆಯೆಂದು ಆಶಿಸಬಹುದು. ಈ ಕಲಾಪ್ರದರ್ಶನ ದ ಉದ್ಘಾಟನೆಯನ್ನು ಮಾಡಿದವರು ಶ್ರೀ ಯುತ ಚಿ.ಸು.ಕೃಷ್ಣ ಸೆಟ್ಟರು. ಅವರೊಟ್ಟಿಗೆ ಶ್ರೀ ಯುತ ಗಣಪತಿ ಹೆಗಡೆ, ಶ್ರೀ ಯುತ ನಾಗಪತಿ ಭಟ್ ಹಾಗೂ ದಾ ಕ ಹ ವಿ ಸ ದ ಅನೇಕ ಸದಸ್ಯರು ,ಕಲಾವಿದ ವಿಶ್ವನಾಥ ಹೆಗಡೆ ಉಪಸ್ಥಿತರಿದ್ದರು.
-- ಲೇಖನ--ದತ್ತಾತ್ರೇಯ ಎನ್. ಭಟ್ಟ
ಕಲಾವಿಮರ್ಶಕ,ದಾವಣಗೆರೆ
(ಚಿತ್ರ ಕೃಪೆ-ಕಲಾವಿದ ವಿಶ್ವನಾಥ ಹೆಗಡೆ)