Published By: Kala Karanataka
Last Updated Date: 25-Aug-2024
" ನಿಸರ್ಗ ಹಲವು ಜೀವಿಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಮನುಷ್ಯ ಪ್ರಾಣಿಯೂ ಒಂದು."
ನಿಸರ್ಗ ಹಲವು ಜೀವಿಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಮನುಷ್ಯ ಪ್ರಾಣಿಯೂ ಒಂದು. ವೈಚಿತ್ರ್ಯವೆಂದರೆ, ವಿಭಿನ್ನ ಸ್ವಭಾವ, ವಿಭಿನ್ನ, ಲಕ್ಷಣ, ವಿಭಿನ್ನ ಹವ್ಯಾಸಗಳು ಮನುಷ್ಯನಲ್ಲಿ ಮಾತ್ರ ಇರುವಂತೆ ಸೃಷ್ಟಿಸಿರುವುದು ಕುತೂಹಲಕರ ಎನಿಸುತ್ತದೆ. ಏಕೆ ಹೀಗೆ? ಎಂದರೆ ಅದು ನಿಸರ್ಗದ ಸ್ವಭಾವ ಅಥವಾ ವೈಶಿಷ್ಟ್ಯ ಎನ್ನಬಹುದು ಅಷ್ಟೆ. ಮನುಷ್ಯರು ಬದುಕಿ ಸಾಯುತ್ತಾರೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಬದುಕಿರುವವರೆಗೂ ಉಪಜೀವನಕ್ಕೆ ಹಲವು ಕೆಲಸಗಳನ್ನು ಮಾಡುತ್ತಾರೆ. ಉಪಜೀವನಕ್ಕಾಗಿ ಮಾಡುವ ಎಲ್ಲ ಕೆಲಸಗಳೂ ಲೌಕಿಕ ಅಥವಾ ಭೌತಿಕ. ಆದರೆ, ಉಪಜೀವನ ಸಂಬಂಧಿ ಕೆಲಸಗಳಾಚೆಗೆ ಮಾಡುವ ವಿಶಿಷ್ಠ ಪ್ರವೃತ್ತಿಗಳನ್ನು ಕೆಲಸಗಳು ಎನ್ನಲಾಗುತ್ತದೆಯೆ? ಇಲ್ಲ!! ಪ್ರವೃತ್ತಿಯೂ ಹಲವು ಮುಖಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಅಂದರೆ ಚಿತ್ರಿಸುವ, ಶಿಲ್ಪಿಸುವ, ಹಾಡುವ, ನಟಿಸುವ, ಆವಿಷ್ಕರಿಸುವ, ಅನ್ವೇಷಿಸುವ, ಶೋಧಿಸುವ ಮೊದಲಾದ ವಿಷಯಗಳಲ್ಲಿ ಅದು ತಲ್ಲೀನವಾಗಿರುತ್ತದೆ.
ಸಂಗ್ರಹ ಪ್ರವೃತ್ತಿಯನ್ನೂ ಈ ಸಾಲಿಗೆ ಸೇರಿಸಬಹುದು ಎಂದು ನನಗೆ ಇತ್ತೀಚೆಗೆ ಅನಿಸಿದೆ. ಒಂದು ಕಾಲದ ಸೃಷ್ಟಿಯಾಗಿ; ಮನೋಮಯ ಜೀವನವನ್ನು ತುಂಬಿದ್ದ ಈಗ ಬಳಕೆಯಲ್ಲಿ ಇಲ್ಲದ ಸುಂದರ ವಸ್ತುಗಳು, ಬಳಕೆಯಲ್ಲಿದ್ದೂ ಬಳಕೆ ತಪ್ಪಿದ ವಸ್ತುವಾಗಿ ಮೂಲೆ ಸೇರಿದ ಗೃಹೋಪಕರಣಗಳು, ಕಲ್ಪಿತ ರೂಪಸೃಷ್ಟಿಯಾಗಿ ಪೂಜೆಗೊಂಡು ಈಗ ಕಲಾವಸ್ತುವಾಗಿ ಮಾತ್ರ ಉಳಿದ ದೇವರ ಮೂರ್ತಿಶಿಲ್ಪಗಳು, ಪೂಜಾ ಸಾಮಗ್ರಿಗಳು, ಅಳೆಯುವ, ಅರೆಯುವ, ಕತ್ತರಿಸುವ, ಕೊಯ್ಯುವ, ಹೋಳುವ, ಕುಟ್ಟುವ, ಬೀಸುವ, ನೇಯುವ, ತೂಗುವ, ಅಳೆಯುವ, ಅರೆಯುವ, ಸೋಸುವ, ತೊನೆಯುವ, ನೇಯುವ, ತೂಗುವ ತೊಟ್ಟಿಲು, ಬೆಳ್ಳಿ ಕಂಚು, ಹಿತ್ತಾಳೆಯ ಹಲವು ಬಗೆಯ ತಾಟು, ಬಟ್ಟಲು; ನೀರು ತುಂಬಿಸುವ ಹಂಡೆ, ತಪ್ಪೇಲಿಗಳು, ಚಂಬುಗಳು, ಆರತಿ ತಟ್ಟೆಗಳು, ಧೂಪಾರತಿಗಳು, ಪರಾತು, ಗಿಂಡಿ, ದೀಪದ ಗೊಂಚಲು, ಸಮೆಗಳು, ಬೀಟೆ ಮರದ ಫಲ್ಲಂಗ, ಕುರ್ಚಿಗಳು, ಟೀಪಾಯಿಗಳು, ವಿಭೂತಿ ಬುಟ್ಟಿ, ಒಳ್ಳ - ಒಣಕೆ ಒಂದೇ ಎರಡೇ ನೂರಾರು ಬಗೆಯ ವಸ್ತುಗಳ ಸಂಗ್ರಹ ಹುಚ್ಚು ಹಿಡಿ ಸುತ್ತದೆ. ಸುರಪುರ ಗರುಡಾದ್ರಿ, ಮೈಸೂರು, ತಂಜಾವೂರು ಸಾಂಪ್ರದಾಯಿಕ ಚಿತ್ರಗಳು, ಸ್ವತಃ ತಾನು ರಚಿಸಿರುವ ಸೂಕ್ಷ್ಮ ರೇಖೆಗಳ ನೂರಾರು ಚಿತ್ರಗಳು ನೋಡುವುದೆಂದರೆ ಕಣ್ಣಿಗೆ ಹಬ್ಬ ಒಂದು ಕ್ಷಣ,
- ಆದರೆ ನೋಡುತ್ತ ನೋಡುತ್ತ ನೂರಾರು ವರ್ಷಗಳ ಹಿಂದಕ್ಕೆ - ಕಾಲನ ಗರ್ಭಕ್ಕೆ ಸರಿದು - ನಮ್ಮ ಹಿಂದಿನ ಅಂದರೆ ಪೂರ್ವಸೂರಿ ರಸಿಕರು ತಮ್ಮ ಬದುಕನ್ನು ಹೇಗೆ ಸುಂದರವಾಗಿ ರೂಪಿಸಿಕೊಂಡು ಬಂದವರು! ಈಗಿನ ನಮ್ಮ ಬದುಕು ಏಕೆ ಹೀಗಾಗಿದೆ! ಮೇಲೆಲ್ಲಾ ತಳುಕು ಒಳಗೆಲ್ಲ ಹುಳುಕು ಹುಳುಕಾಗಿದೆ? ಟೋಳ್ಳಾಗಿದೆ! ಎಂದು ಚಿಂತೆಗೆ ಈಡುಮಾಡುತ್ತವೆ ಇಲ್ಲಿನ ವಸ್ತುಗಳು. ಈ ಎಲ್ಲ ವಸ್ತುಗಳು ಎಲ್ಲಿವೆ! ಬೇರೆಲ್ಲೂ ಇಲ್ಲ! ಕಲಬುರಗಿಯ ಪ್ರಖ್ಯಾತ ಕಲಾವಿದ ಡಾ ವಿಜಯ ಹಾಗರಗುಂಡಗಿಯವರ ಅಭೂತಪೂರ್ವ ಸಂಗ್ರಹದಲ್ಲಿ. ವಿಜಯ್ ಅವರ ಎರಡ್ಮೂರು ಮನೆಗಳ ಆರೇಳು ಕೋಣೆಗಳಲ್ಲಿ ಈ ಎಲ್ಲ ವಸ್ತುಗಳು ಒಪ್ಪ ಓರಣವಾಗಿ ಇಡಲ್ಪಟ್ಟಿವೆ. ಈ ಮನುಷ್ಯನಿಗೆ ಅದೆಂತಹ ಹುಚ್ಚೋ ತಿಳಿಯದು - ಒಬ್ಬ ಮನುಷ್ಯನಿಂದ ಇದು ಸಾಧ್ಯವೇ ಎಂದು ವಿಸ್ಮಯಗೊಳಿಸುತ್ತದೆ. ಇವರು ಪ್ರಖ್ಯಾತ ಕಲಾವಿದ, ನನ್ನ ಪ್ರಕಾರ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಕರ್ನಾಟಕದಲ್ಲೇ ಸರಿಗಟ್ಟುವವರಿಲ್ಲ! ಅಂತೆಯೇ ಇಂತಹ ಸಂಗ್ರಹದ ವಿಷಯದಲ್ಲೂ! ಕಲಬುರಗಿಯ ವಿಜಯ ಹಾಗರಗುಂಡಗಿ ಅವರಿಗೆ ಅವರೇ ಸಾಟಿ, ಮತ್ತೊಬ್ಬರಿಲ್ಲ! ಇದು ಅತಿಶಯದ ಮಾತೂ ಅಲ್ಲ. ಸ್ತುತಿ - ನಿಂದೆಗಳು ಈ ಮಹಾನ್ ಸಾಧಕನಿಗೆ ಗಣ್ಯವೂ ಅಲ್ಲ. ಇಂತಹ ಮಾತುಗಳ ಕಡೆ ಇವರ ಗಮನವೂ ಇಲ್ಲ! ನೀವೂ ಒಂದು ಅವಕಾಶ ಪಡೆದು ಒಮ್ಮೆಯಾದರೂ ಈ ಸಂಗ್ರಹಕ್ಕೆ ಬೇಟಿಮಾಡಿ ಕಣ್ಮನಗಳನ್ನು ತುಂಬಿಕೊಳ್ಳಲು ಮರೆಯಬೇಡಿ. ಹಾಂ ನೆನಪಿಡಿ, ನಿಮಗೆ ಪ್ರವೇಶ ಸಿಕ್ಕರೆ ಮಾತ್ರ ಅದು ಸಾಧ್ಯ!
---Shivanand Bantanur