Published By: Kala Karanataka
Last Updated Date: 13-Jan-2023
ನಾಟಕದ ವಿಮರ್ಶೆ- ' ಕರಿ ಅಂಗಿ ಓವರ್ ಕೋಟು '
' #ಸಮಾಜಮುಖಿ' ಯ ಹೊಸವರ್ಷದ ಸಂಚಿಕೆಯಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದು, ಪ್ರತಿಕ್ರಯಿಸಿ.#ಬಿಳಿ_ಅಂಗಿ_ಓವರ್_ಕೋಟು
ಅಭಿನಯ: ಸಮಾಜಮುಖಿ ರಂಗಬಳಗ.
' ಕರಿ ಅಂಗಿ ಓವರ್ ಕೋಟು '
ಪೆಂಟಯ್ಯನ ಅಂಗಿ ಕನ್ನಡದ ಪ್ರಮುಖ ಕವನಗಳಲ್ಲೊಂದಾದರೆ, ಓವರ್ ಕೋಟ್, ರಷ್ಯಾದ ವಾಸ್ತವವಾದೀ ಸಾಹಿತ್ಯಕ್ಕೆ ಬಾಗಿಲು ತೆರೆದ ಕಥೆ ಎನ್ನಲಾಗುತ್ತದೆ. ಎರಡೂ ಅಗದೀ ಮಹತ್ವದ ಕೃತಿಗಳು. ಇಪ್ಪತ್ತೊಂದನೆಯ ಶತಮಾನದಲ್ಲಿ ಕೆ.ವಿ ತಿರುಮಲೇಶರು ಬರೆದ ಕೆಂಪಯ್ಯನ ಅಂಗಿಗೂ ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಲ್ಲಿ ನಿಕೊಲಾಯ್ ಗೊಗೊಲ್ ಬರೆದ 'ಓವರ್ ಕೋಟ್' ಗೂ ಸಾಕಷ್ಟು ಸಾಮ್ಯಗಳಿವೆ. ಈ ಸಾಮ್ಯತೆಗಳ ಗ್ರಹಿಕೆಯಲ್ಲೇ ಪ್ರಸ್ತುತ ರಂಗಪ್ರಯೋಗವನ್ನು ಕಟ್ಟಲಾಗಿದೆ.
ಇದ್ದಿಲು ಮೂಟೆ ಹೊರುತ್ತ ಮೈ, ಬಟ್ಟೆಗಳನ್ನೆಲ್ಲಾ ಕರಿ ಮಾಡಿಕೊಂಡ ಕೆಂಪಯ್ಯನಿಗೆ ಅವನದೇ ಆದ ಕನಸುಗಳಿವೆ. ಈ ಕೊಳೆಯ ನರಕದಿಂದ ಹೊರಬರಬೇಕು, ತಾನೂ ಎಲ್ಲರಂತಾಗಬೇಕೆಂಬ ಕನಸು. ಇಂಥ ಕನಸಿನ ನನಸಿಗೆ ದಾರಿಯಾಗೋದು, ಆಗಷ್ಟೇ ರಿಲೀಸ್ ಆಗಿ ಊರಿಗೆ ಬಂದಿರುವ 'ಅಡವಿ ರಾಮುಡು' ಎನ್ನೋ ಹೊಚ್ಚ ಹೊಸ ಸಿನಿಮಾ. ತಾನು ಧರಿಸಿಕೊಂಡ ಬಟ್ಟೆಗಳನ್ನು ನೋಡಿದ್ರೆ ಟಾಕೀಸಿನ ಒಳಗೆ ಬಿಡೋದಿಲ್ಲ ಎಂತ ಗೊತ್ತಾದಾಗ ಪೆಂಟಯ್ಯ ಬಿಳೀ ಅಂಗಿ ಕೊಂಡುಕೊಳ್ಳೋಕೆ ಮನಸ್ಸು ಮಾಡ್ತಾನೆ. ಕೊಂಡುಕೊಳ್ತಾನೆ ಕೂಡ. ಇನ್ನೇನು ಆತನ ಕನಸು ನನಸಾಗೋದಕ್ಕೆ ಒಂದೇ ಮೆಟ್ಟಿಲು ಬಾಕಿ ಎಂದಿರೋವಾಗ ವಕ್ಕರಿಸಿಬಿಟ್ತಾನೆ ಕ್ರೂರಿ ಪೋಲೀಸ್ ಪಾಟೀಲ. ಒತ್ತಾಯಪೂರ್ವಕವಾಗಿ ಪೆಂಟಯ್ಯನ ಮೇಲೆ ಇದ್ದಿಲ ಮೂಟೆ ಹೊರಿಸಲಾಗ್ತದೆ. ಹೊಸ ಬಿಳೀ ಅಂಗಿಯೂ ಕರಿಯಾಗುವದರೊಂದಿಗೆ ಪೆಂಟಯ್ಯನ ಕನಸೂ ಕಪ್ಪಾಗಿಬಿಡ್ತದೆ. ಅಂದಿನಿಂದ -ಅಂದಿನಿಂದ ಯಾತಕ್ಕೆ, ಆ ಕ್ಷಣ ದಿಂದ ಪೆಂಟಯ್ಯನ ಬಿಳಿ ಅಂಗಿ ಎಂದೂ ಬಿಳಿಯಂಗಿಯಾಗಿರಲಿಲ್ಲ
-ಕೆ.ವಿ.ತಿರುಮಲೇಶ್
ಇನ್ನು ಸೇಂಟ್ ಪೀಟರ್ಸ್ಬರ್ಗ್ ನ 'ಅಕಾಕಿ' ಯದೂ ಇಂಥದೇ ಕಥೆ. ಆತ ತೊಟ್ಟುಕೊಂಡ ಪುರಾತನ ಕಾಲದ ಓವರ್ ಕೋಟ್ ಗೆ ಹಲವಾರು ತೇಪೆಗಳು. ಚಳಿ ಪ್ರಾರಂಭವಾಗಿದೆ. ಹೇಗಾದರೂ ಮಾಡಿ ಹೊಸ ಕೋಟೊಂದನ್ನ ಕೊಂಡ್ಕೊಂಡು ಚಳಿಯಿಂದ ರಕ್ಷಿಸಕೊಳ್ಬೇಕು. ತನ್ನ ಬಜೆಟ್ ಗಾಗುವ ಟೇಲರ್ ನನ್ನು ಹುಡುಕ್ತಾನೆ ಆತ. ಅವ್ನೂ ಸಿಕ್ತಾನೆ. ಕಾಸು ಕಾಸು ಕೂಡಿಸ್ತಾನೆ. ಓವರ್ ಕೋಟನ್ನೂ ಕೊಂಡ್ಕೊಳ್ತಾನೆ. ಮೊದಲ ದಿನದ ಸಂಜೆ ಓವರ್ ಕೋಟ್ ತೊಟ್ಕೊಂಡು ಹೋಗ್ತಿದ್ದ ಅಕಾಕಿಯನ್ನ ಅಡ್ಡಗಟ್ಟಿದ, ಪ್ರಭುತ್ವವೇ ಹುಟ್ಟುಹಾಕಿದ ಕಳ್ಳರು ಕೋಟನ್ನು ದೋಚಿಬಿಡ್ತಾರೆ. ಕೋಟನ್ನು ಕಳಕೊಂಡ ಅಕಾಕಿ ಚಳಿಯಿಂದ ಸತ್ತುಹೋಗ್ತಾನೆ. 'ಅಕಾಕಿಯ ಭೂತ ಊರಲ್ಲೆಲ್ಲ ತಿರುಗಾಡ್ತಾ ಇದೆ' ಅಂತ ಸುದ್ದಿ ಹಬ್ತದೆ. ಒಂದು ರಾತ್ರಿ ಅದೇ ಕೋಟು ತೊಟ್ಕೊಂಡು ಗೆಳತಿಯ ಮನೆಗೆ ಹೊರಟ ಪೊಲೀಸ್ ಅಧಿಕಾರಿಯ ಕತ್ತಿನ ಪಟ್ಟಿ ಹಿಡಿದು 'ಭೂತ' ಓವರ್ ಕೋಟನ್ನು ಕಸಿದುಕೊಳ್ತದೆ. ಮತ್ತೆಂದೂ ಊರಲ್ಲ ಭೂತ ಕಾಣೋದಿಲ್ಲ.
ಅಲ್ಲೂ ಒಂದು ' ಕನಸಿನ ಕೊಲೆಯಾಗುತ್ತದೆ'
ಹೀಗೆ ಆಂಗಿಯನ್ನೂ, ಕೋಟನ್ನೂ ರೂಪಕವಾಗಿಸಿಕೊಂಡ, ಜನಸಾಮಾನ್ಯರನ್ನ ತಲೆಯೆತ್ತದಂತೆ ಮೆಟ್ಟಿ ಹೊಸಕಿ ಹಾಕುವ ಪ್ರಭುತ್ವದ ಅಮಾನವೀಯ ಮುಖಗಳನ್ನ ಬೇರೆ ಬೇರೆ ನೆಲೆಯಲ್ಲಿ ಅನಾವರಣಗೊಳಿಸುವ ಕೃತಿಗಳನ್ನ ಎತ್ತಿಕೊಂಡು ರೂಪಿತವಾದ ರಂಗ ಪ್ರಯೋಗ ' ಬಿಳಿ ಅಂಗಿ ಓವರ್ ಕೋಟು'
' ಕನಸೇ ಕನಸೇ ಕಮರಿಹೋಗದಿರು ಕನಸೇ.....' ಎಂದು ಕನಸಿನ ಹಾಡಿಂದ ಶುರುವಾಗುವ ನಾಟಕವಾದರೂ ನಿರೂಪಣೆಗೆ ಆಯ್ದುಕೊಂಡಿದ್ದು ವಾಸ್ತವವಾದಿ ಶೈಲಿಯೇ. ಪೇಟೆಯ ಬೀದಿಯಲ್ಲಿರುವ ಇದ್ದಿಲು ಅಂಗಡಿ, ಭಟ್ಟರ ಚಹಾದ ಹೊಟೆಲ್, ರೆಡಿಮೇಡ್ ಬಟ್ಟೆಯ ಅಂಗಡಿಗಳ ಅಂಗಳದಲ್ಲೇ ಪೆಂಟಯ್ಯನ ಕಥೆಯ ಆಟ ಕಟ್ಟುತ್ತಾರೆ ನಿರ್ದೇಶಕರು. ಪೆಂಟಯ್ಯನ ಜೊತೆಗೆ ಇದ್ದಿಲು ಅಂಗಡಿ ಓನರ್, ಒಬ್ಬಿಬ್ಬರು ಪಡ್ಡೆ ಹುಡುಗರು, ಬಟ್ಟೆ ಅಂಗಡಿಯ ಹೆಂಗಸು,ಪೋಲೀಸ ಪಾಟೀಲ್. ಜೊತೆಗೆ ಬೀದಿ ನಾಯಿಯೂ ಇದೆ. ಗಮನಿಸಿ. ಅದು 'ಬಿಳಿಯ' ನಾಯಿ. ನಾಟಕದ ಘಟನೆಗಳಿಗೆಲ್ಲ ಸಾಕ್ಷಿಯಾಗುವ ಪೆಂಟಯ್ಯನ ಈ ನಾಯಿ ಒಂದು ರೀತಿಯಲ್ಲಿ ಪೆಂಟಯ್ಯನ ಮನೋಭಾವದ ಬಿಂಬ ಕೂಡ. ನಾಟಕದುದ್ದಕ್ಕೂ ಪೋಲೀಸ ಪಾಟೀಲನನ್ನು ಎದುರಿಸಿ ನಿಲ್ಲುವ ಪೆಂಟಯ್ಯನ ದೊಟ್ಟ ಸಪೋರ್ಟ್ ಇದು. ಯಾರ ಕಂಡರೂ ಕೂಗದ ನಾಯಿ ಪೋಲಿಸಪ್ಪನಿಗೆ ಮಾತ್ರ ಬೊಗಳಿ ಹೆದರಿಸ್ತದೆ.
ಪೆಂಟಯ್ಯನ ಕಥೆ ನಡೆಯುತ್ತಿರುವಾಗಲೇ ' ಓದಾನೊಂದು ಕಾಲದಲ್ಲಿ.....ಏನಾಯ್ತಪ್ಪಾಂದ್ರೆ' ಎನ್ನುವ ಹಾಡಿನೊಂದಿಗೆ ಮಧ್ಯೆ ಸೇರಿಕೊಳ್ಳುವ ಅಕಾಕಿ ಯ ಕಥೆ ಸಮಾನಾಂತರವಾಗಿ ನಡೆಯುತ್ತ ಹೋಗುತ್ತದೆ. ಹೊರನಾಡಿನ ಈ ಕಥೆಗೆ ಸೂಚ್ಯವಾದ ರಂಗ ಸಜ್ಜಿಕೆಯನ್ನ ರಂಗದ ಹೊರಗಿನಿಂದಲೇ ಜಾರಿಸುವ ಜಾಣತನ ತೋರುತ್ತಾರೆ ನಿರ್ದೇಶಕರು. ಹಳ್ಳಿಯ ಸೆಟ್ ನ ಮುಂಭಾಗದಲ್ಲಿ ಲಭ್ಯವಿದ್ದ ಜಾಗದಲ್ಲೇ ಹಿಮ ಮುತ್ತಿದ ಬೆಟ್ಟ, ನೆಲವನ್ನೆಲ್ಲ ಹೊತ್ತು ತರುವ ಕಲಾವಿದರು ಸೇಂಟ್ ಪೀಟರ್ಸ್ಬರ್ಗ್ ನ ವಾತಾವರಣವನ್ನು ಸುಲಭವಾಗಿ ಸೃಷ್ಟಿಮಾಡಿಬಿಡುತ್ತಾರೆ. ಕವನವನ್ನು ಕಥೆಯಾಗಿಸುತ್ತ, ಕಥೆಯನ್ನು ಕಾವ್ಯವಾಗಿಸುತ್ತ ಸಾಗುವ ಈ ರಂಗಪ್ರಯೋಗ ಗಾಢ ವಿಷಾದದ ತಂತಿಯೊಂದನ್ನು ನೋಡುಗರೆದೆಯಲ್ಲಿ ಮೀಟುವ ಯತ್ನ ಮಾಡುತ್ತದೆ. ಪ್ರಯೋಗಕ್ಕೆ ಆರಿಸಿಕೊಂಡಿರುವ ಕಥೆ, ಕಾವ್ಯಗಳು ಮೂಲದಲ್ಲೇ ಅಂಥ ಭಾವವನ್ನು ಹೊತ್ತಿರುವದು ಕೂಡ ಇದಕ್ಕೆ ಕಾರಣ.
ಇಡಿಯ ರಂಗ ಪ್ರಯೋಗ ಮೂಲಕ್ಕೆ ನಿಷ್ಠವಾಗಿದೆ. ಸರಳವಾದ ಮಾತುಗಳು, ಹಾಡುಗಳು ಆಶಯವನ್ನ ಸುಲಭವಾಗಿ ದಾಟಿಸುತ್ತವೆ. ಎಲ್ಲ ನಟರೂ ಸಾಕಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರಯೋಗದಲ್ಲಿ ಅಚ್ಚುಕಟ್ಟುತನವಿದೆ. ವಸ್ತ್ರ ವಿನ್ಯಾಸ ಸರಳವಾಗಿ, ಅಥೆಂಟಿಕ್ ಆಗಿದೆ. ರೆಕಾರ್ಡೆಡ್ ಸಂಗೀತ ಹಾಡುಗಳಿಗೆ ಸೀಮಿತವಾಗಿದೆ. ಸಂಯೋಜನೆಯೂ ಚೆನ್ನಾಗಿದೆ.
ಇಷ್ಟೆಲ್ಲ ಆದ ಮೇಲೂ, ಇನ್ನೊಂದಿಷ್ಟು ಸಂಗೀತದ ಸಪೋರ್ಟ್ ನೊಂದಿಗೆ ಪ್ರಯೋಗದ ಅನುಭವವನ್ನು ಇನ್ನಷ್ಟು ಗಾಢವಾಗಿಸಬಹುದಿತ್ತೇನೋ, ಇನ್ನೊಂದು ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡು ಅಂತ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದಿತ್ತೇನೋ ಎನಿಸುತ್ತದೆ.
ಏನೇ ಇರಲಿ, ಇಂಥದೊಂದು ಹೊಸ ಪ್ರಯತ್ನಕ್ಕೆ ಅಭಿನಂದನೆಗಳು ಸಲ್ಲುತ್ತವೆ.
- ಕಿರಣ ಭಟ್, ಹೊನ್ನಾವರ