logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  23-Jun-2023
" ಕೆ. ವೆಂಕಟಪ್ಪ ನಮ್ಮ ನಾಡಿನ ಮಹಾನ್ ಕಲಾವಿದರು."

ಕೆ. ವೆಂಕಟಪ್ಪ
ಕೆ. ವೆಂಕಟಪ್ಪ ನಮ್ಮ ನಾಡಿನ ಮಹಾನ್ ಕಲಾವಿದರು.
ಕೆ. ವೆಂಕಟಪ್ಪ ಅವರದು ಕಲಾವಿದರ ವಂಶ. 
ವೃತ್ತಿಯಲ್ಲಿ ಚಿನ್ನ ಬೆಳ್ಳಿಗಳ ವ್ಯಾಪಾರ ಈ ವಂಶದ್ದಾಗಿತ್ತು. ವಿಗ್ರಹಗಳನ್ನು ಮಾಡುವುದು, ಪುತ್ಥಳಿಗಳನ್ನು ಕಡೆಯುವುದು, ನವುರಾಗಿ ಕುಸುರಿಕೆಲಸ ಮಾಡುವುದು, ಗೆರೆಗಳಲ್ಲಿ ಸೊಗಸಾದ ಚಿತ್ರಗಳನ್ನೂ, ಮಂಡಲಗಳನ್ನೂ ಬಿಡಿಸುವುದು ಇವೆಲ್ಲ ಈ ಕುಟುಂಬದ ಹಿಂದಿನವರು ನಡೆಸಿಕೊಂಡು ಬಂದದ್ದು. ವೆಂಕಟಪ್ಪನವರ ತಾತ ಕೃಷ್ಣಪ್ಪನವರು, ಸಾಹಿತ್ಯ ಮತ್ತು ಕಲೆಗಳ ಮಹಾನ್ ಪೋಷಕರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಅಚ್ಚುಮೆಚ್ಚಾಗಿ, ಅವರ ಹತ್ತಿರವೇ ಓಡಿಯಾಡಿ, ಅವರ ಒತ್ತಾಸೆಯನ್ನು ಪಡೆದುಕೊಂಡ ಕಲಾವಿದರಾಗಿದ್ದರು. ವೆಂಕಟಪ್ಪನವರ ತಂದೆಯವರು ಚಾಮರಾಜ ಒಡೆಯರ ಕಾಲದಿಂದ ಅರಮನೆಯ ಕೆಲಸದಲ್ಲಿದ್ದ ಕಲೆಗಾರರು. 


ಕೃಷ್ಣಪ್ಪ ವೆಂಕಟಪ್ಪನವರು 1886ರ ಜೂನ್ 23ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ವೆಂಕಟಪ್ಪ. ತಾಯಿ ರಂಗಮ್ಮ. 
ನಾಲ್ವಡಿ ಕೃಷ್ಣರಾಜರ ಆಳ್ವಿಕೆ ಮೊದಲಾಗುವ ವೇಳೆಗೆ ವೆಂಕಟಪ್ಪ ಇನ್ನೂ ಎಳೆಯ ಹುಡುಗ. ತಂದೆ ಬದುಕಿದ್ದಾಗ ಅವರೊಂದಿಗೆ ಅರಮನೆಯಲ್ಲೆಲ್ಲ ಓಡಾಡಿ, ಅಲ್ಲಿನ ಕಲಾ ಪ್ರಕಾರಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಚುರುಕು ಬುದ್ಧಿಯ ಹುಡುಗ. ಮೇಲ್ಮಟ್ಟದ ಕಲೆಗಾರನಾಗುವ ಎಲ್ಲ ಸೂಚನೆಗಳೂ ಈ ಹುಡುಗನಲ್ಲಿ ಎದ್ದು ಕಾಣುತ್ತಿದ್ದವು.
ಇದನ್ನು ಮಹಾರಾಜರೂ ಕಂಡುಕೊಂಡರು. ತಂದೆಯಿಲ್ಲದ ಈ ಬುದ್ಧಿಶಾಲಿಯ ಬೆಳವಣಿಗೆ ತಮ್ಮ ಹೊಣೆಯೆಂದು ಅರಿತುಕೊಂಡರು. ಅವನನ್ನು ಕರೆಯಿಸಿಕೊಂಡು, ಪರೀಕ್ಷಿಸಿ, ಅವನಿಂದ ಕಲಾಕೃತಿಗಳನ್ನು ಮಾಡಿಸಿ ಮೆಚ್ಚಿಕೊಂಡರು. ಆಧುನಿಕ ವ್ಯವಸ್ಥೆಯಲ್ಲಿ ಈತ ಕಲಿತರೆ ಒಳ್ಳೆಯದು ಎಂದು ನಿರ್ಧರಿಸಿ ಮದರಾಸಿನ ಕಲಾಶಾಲೆಯಲ್ಲಿ ಕಲಿಯಲು ಎಲ್ಲ ಏರ್ಪಾಡುಗಳನ್ನೂ ಮಾಡಿಸಿದರು. ವೆಂಕಟಪ್ಪ ಅಲ್ಲಿ ಕಲಿತು ಮೈಸೂರಿಗೆ ಹಿಂದಿರುಗಿದಾಗ ಅವರ ವಯಸ್ಸು ಸುಮಾರು ಇಪ್ಪತ್ತು. 
ವೆಂಕಟಪ್ಪ ಅವರಿಗೆ ಇನ್ನೂ ಕಲಿಯುವ ಇಂಗಿತವಿರುವುದಕ್ಕೆ ಸಂತಸಪಟ್ಟ ಮೈಸೂರು ಮಹಾರಾಜರು ಕಲ್ಕತ್ತ ನಗರದಲ್ಲಿದ್ದು ಕಲಾಶಾಲೆಯಲ್ಲಿ ಕಲಾಭ್ಯಾಸ ಮಾಡಲು ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟರು. ವೆಂಕಟಪ್ಪನವರು ಸೇರಿದ ಕಲ್ಕತ್ತ ಕಲಾಶಾಲೆಯ ಮುಖ್ಯಸ್ಥರಾಗಿದ್ದವರು ಮಹಾನ್ ಕಲಾವಿದ ಪೆರ್ಸಿ ಬ್ರೌನ್. ಆ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಮಹಾನ್ ಕಲಾತಪಸ್ವಿ ಅವನೀಂದ್ರನಾಥ ಠಾಕೂರರು ವೆಂಕಟಪ್ಪನವರ ಮಾರ್ಗದರ್ಶಕರಾದರು.
ಅವನೀಂದ್ರನಾಥರು ಲೋಕಪ್ರಖ್ಯಾತರು. ವೆಂಕಟಪ್ಪನವರೂ ಅಲ್ಲದೆ ಅವರ ವಿದ್ಯಾರ್ಥಿಗಳಾಗಿದ್ದ ನಂದಲಾಲ ಬೋಸ್, ಅಸಿತ ಕುಮಾರ ಹಾಲದಾರ, ಸುರೇಂದ್ರನಾಥ ಗಂಗೂಲಿ, ಶೈಲೇಂದ್ರ ದೇವ, ಕ್ಷಿತೀಂದ್ರ ಮಜೂಮದಾರ ಮೊದಲಾದವರೆಲ್ಲ ಮುಂದೆ ಪ್ರಸಿದ್ಧ ಕಲಾವಿದರಾದರು.
ಎರಡು ವರ್ಷಗಳ ಓದಿಗೆಂದು ಕಲ್ಕತ್ತ ಕಲಾಶಾಲೆಯನ್ನು ಸೇರಿದ ವೆಂಕಟಪ್ಪನವರು, ಅಲ್ಲಿ ಏಳೂವರೆ ವರ್ಷಗಳನ್ನು ಕಳೆದರು. ಚಿತ್ರಕಲಾಭ್ಯಾಸಕ್ಕೆಂದು ಹೋದ ಅವರು ಅಲ್ಲಿ ಕಲೆಯ ಬೇರೆ ಬೇರೆ ಪ್ರಕಾರಗಳಾದ ರೇಖಾಚಿತ್ರ, ವರ್ಣಚಿತ್ರ, ಶಿಲ್ಪವಿನ್ಯಾಸ ಹೀಗೆ ಎಲ್ಲವನ್ನೂ ಅಭ್ಯಾಸ ಮಾಡಿ ಪರಿಣತಿ ಸಾಧಿಸಿದರು. ಕಲ್ಕತ್ತೆಯಲ್ಲಿ ವೆಂಕಟಪ್ಪ ಇದ್ದದ್ದು ದಕ್ಷಿಣ ಭಾರತದ ಹೋಟೆಲ್ ಒಂದರಲ್ಲಿ. ಅವರಿಗೆ ಕೆಲಸವೆಂದರೆ ಊಟ, ತಿಂಡಿಗಳ ಮೇಲೂ ಗಮನ ಹರಿಯುತ್ತಿರಲಿಲ್ಲ. ಗುರುಗಳಾದ ಅವನೀಂದ್ರನಾಥ ಠಾಕೂರರು ಅವರನ್ನು ತುಂಬಾ ಮೆಚ್ಚಿಕೊಂಡಿದ್ದರು. ಅವರೂ, ಕವಿ ರವೀಂದ್ರನಾಥ ಠಾಕೂರರೂ ಅವರನ್ನು ‘ಅಪ್ಪ’ ಎಂದೇ ಕರೆಯುತ್ತಿದ್ದರು.
ವೆಂಕಟಪ್ಪನವರು ವಿದ್ಯಾರ್ಥಿಯಾಗಿದ್ದಾಗ, 1909ರಿಂದ 1913ರವರೆಗೆ ಹೆರಿಂಗ್ಹ್ಯಾಮ್ ಎಂಬಾಕೆ ಅಜಂತಾಗುಹೆಗಳ ಒಳಗಿರುವ ವಿಶ್ವವಿಖ್ಯಾತ ಭಿತ್ತಿಚಿತ್ರಗಳ ಪ್ರತಿಕೃತಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಕೈಗೊಂಡು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಲಾವಿದರನ್ನು ಸೂಚಿಸುವಂತೆ ಠಾಕೂರರನ್ನು ಕೇಳಿದರು. ಅವನೀಂದ್ರ ನಾಥರು ಒಡನೆಯೇ ವೆಂಕಟಪ್ಪನವರನ್ನು ಸೂಚಿಸಿದರು. ಈ ಸಂದರ್ಭದಲ್ಲಿ ವೆಂಕಟಪ್ಪನವರು ತಯಾರಿಸಿದ ಪ್ರತಿಕೃತಿಗಳು ಮೂಲದ ವಿವರವನ್ನೂ ವರ್ಣವಿನ್ಯಾಸವನ್ನೂ ಮಾತ್ರವಲ್ಲದೆ ಅಲ್ಲಿನ ರಸವನ್ನೂ ಪ್ರತಿಬಿಂಬಿಸುವಂತಿದ್ದುವು. ಲೇಡಿ ಹೆರಿಂಗ್ ಹ್ಯಾಂ ಈ ಚಿತ್ರಗಳನ್ನೆಲ್ಲ ಇಂಗ್ಲೆಂಡಿಗೆ ಒಯ್ದು ಅದನ್ನು ಪ್ರಕಟಿಸುವ ಸನ್ನಾಹದಲ್ಲಿದ್ದಾಗ ಇವೆಲ್ಲವನ್ನೂ ಇರಿಸಿದ್ದ ಕಟ್ಟಡವು ಬೆಂಕಿಯ ಅನಾಹುತಕ್ಕೆ ತುತ್ತಾಗಿ ಈ ವರ್ಣಚಿತ್ರಗಳೆಲ್ಲ ಸುಟ್ಟು ಬೂದಿಯಾದವಂತೆ!
ವೆಂಕಟಪ್ಪನವರು ಕಲ್ಲಕತ್ತೆಯಲ್ಲಿನ ಅಧ್ಯಯನ ಮುಗಿಸಿ ಮೈಸೂರಿಗೆ ಹಿಂದಿರುಗಿದಾಗ ಕಲಾಶಾಲೆಯ ಮುಖ್ಯಸ್ಥರಾಗಿದ್ದ ಪೆರ್ಸಿ ಬ್ರೌನ್ ಸರ್ಕಾರಕ್ಕೆ ಕಾಗದವೊಂದನ್ನು ಬರೆದು ವೆಂಕಟಪ್ಪನವರನ್ನು ಇನ್ನೂ ಹೆಚ್ಚಿನ ಶಿಕ್ಷಣಕ್ಕೆ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫೈನ್ ಆರ್ಟ್ಸ್ಗೆ ಕಳುಹಿಸಿಕೊಡಬೇಕೆಂದು ಸೂಚಿಸಿದರು. ಮೈಸೂರು ಮಹಾರಾಜರು ವೆಂಕಟಪ್ಪನವರ ಸಾಧನೆಯ ಬಗ್ಗೆ ಹೆಮ್ಮೆಪಟ್ಟು ಅವರನ್ನು ಲಂಡನ್ನಿಗೆ ಕಳುಹಿಸಲು ಸಂತೋಷದಿಂದ ಒಪ್ಪಿದರು. ಆದರೆ ಅಷ್ಟರಲ್ಲಿ ವಿಶ್ವಮಹಾಯುದ್ಧ ಮೊದಲಾಗಿ, ದೇಶ ಬಿಟ್ಟು ಹೊರಗೆ ಹೋಗುವುದು ಕಷ್ಟವಾಯಿತು. ವೆಂಕಟಪ್ಪನವರು ಮೈಸೂರಿನಲ್ಲಿಯೇ ನೆಲೆಸಿದರು. ಬ್ರಹ್ಮಚರ್ಯದ ವ್ರತವನ್ನು ಹಿಡಿದು ಏಕಾಂಗಿಯಾಗಿಯೇ ಉಳಿದರು.
ವೆಂಕಟಪ್ಪನವರಿಗೆ ವೀಣೆ ಶೇಷಣ್ಣನವರ ಸಂಪರ್ಕ ಬೆಳೆಯಿತು. ಶೆಷಣ್ಣನವರ ವೀಣೆಯ ಧ್ವನಿ ಕೇಳುತ್ತಾ ಹೋದಂತೆ ವೆಂಕಟಪ್ಪನವರಿಗೆ ವೀಣೆಯಲ್ಲಿ ಆಳವಾದ ಆಸಕ್ತಿ ಬೇರೂರಿ, ಶೇಷಣ್ಣನವರಲ್ಲಿ ವೀಣೆ ಕಲಿಯಬೇಕೆಂದು ಸಂಕಲ್ಪಿಸಿದರು. ಆ ವೇಳೆಗಾಗಲೇ ವೆಂಕಟಪ್ಪನವರ ಬಳಿಯಲ್ಲಿ ಒಂದು ವೀಣೆಯೂ ಇದ್ದಿತು; ಕಲ್ಕತ್ತೆಯಲ್ಲಿದ್ದಾಗಲೇ ಕೊಂಚ ಮಟ್ಟಿಗೆ ವೀಣೆ ನುಡಿಸುವುದನ್ನು ಕಲಿತೂ ಇದ್ದರು. ಶೇಷಣ್ಣನವರ ಸಂಪರ್ಕಕ್ಕೆ ಬಂದನಂತರ ವೀಣೆಯ ಹುಚ್ಚು ಬಲವಾಗಿ ಚಿತ್ರಕಲೆಯೇ ಹಿಂದಕ್ಕೆ ಸರಿಯಿತು. ಹಗಲೂ ಇರುಳೂ ವೀಣೆಯ ಅಭ್ಯಾಸವೇ ಆಗಿಬಿಟ್ಟಿತು.
ಶೇಷಣ್ಣನವರೂ ವೆಂಕಟಪ್ಪನ ಬುದ್ಧಿಶಕ್ತಿಯನ್ನೂ, ಸಾಧನೆಯ ನಿಷ್ಠೆಯನ್ನೂ ಮೆಚ್ಚಿಕೊಂಡರು. ಇವರಿಗಿದ್ದ ಅಪಾರ ಶ್ರದ್ಧೆಯನ್ನು ಗಮನಿಸಿ ವೀಣಾವಾದನದ ಸೂಕ್ಷ್ಮಗಳನ್ನೆಲ್ಲ ಮನದಟ್ಟು ಮಾಡಿಕೊಟ್ಟರು.
ವೆಂಕಟಪ್ಪನವರು ವೀಣೆಯ ಸೊಬಗಿಗೆ ಮಾರು ಹೋಗಿ ಚಿತ್ರಕಲೆಯನ್ನು ಪೂರಾ ಬಿಟ್ಟುಬಿಟ್ಟರು; ತಿಂಗಳುಗಳು, ವರ್ಷಗಳು ಕುಂಚವನ್ನೇ ಹಿಡಿಯುತ್ತಿರಲಿಲ್ಲ. ಸದಾ ವೀಣೆಯ ಅಭ್ಯಾಸವೇ ಆಗಿಬಿಟ್ಟಿತು. ಈ ಸುದ್ದಿ ಗುರುಗಳಾದ ಅವನೀಂದ್ರನಾಥ ಠಾಕೂರರಿಗೆ ಹೇಗೋ ಮುಟ್ಟಿತು. 
ಅವನೀಂದ್ರನಾಥರು ಕಲ್ಕತ್ತೆಯಿಂದ ವೆಂಕಟಪ್ಪನವರಿಗೆ ಕಾಗದವೊಂದನ್ನು ಬರೆದು, “ಏನು ವೆಂಕಟಪ್ಪ, ನೀನು ಚಿತ್ರಕಲೆಯನ್ನು ಕೈಬಿಟ್ಟಿದ್ದೀಯಂತೆ, ದಿಟವೇ? ಹಾಗೆ ಮಾಡಬಾರದು. ಇಷ್ಟು ಶ್ರದ್ಧೆಯಿಂದ ಸಾಧನೆ ಮಾಡಿ ಕಲಿತದ್ದನ್ನು ಬಿಡಬೇಡ. ಚಿತ್ರಕಲೆಯಲ್ಲಿ ನಿನಗೆ ಒಳ್ಳೆಯ ಭವಿಷ್ಯವಿದೆ" ಎಂದು ತಿಳಿಸಿದರು. ಅದಕ್ಕೆ ಉತ್ತರವಾಗಿ ವೆಂಕಟಪ್ಪನವರು ವರ್ಣಚಿತ್ರವೊಂದನ್ನು ಸಿದ್ಧಪಡಿಸಿ ಗುರುಗಳಿಗೆ ಒಪ್ಪಿಸಿದರು. ಈ ಚಿತ್ರದ ಹೆಸರು ‘ವೀಣೆಯ ಹುಚ್ಚು’ ವೀಣೆಯ ಆವೇಶದಿಂದ ಪರವಶರಾಗಿ ಅವನೀಂದ್ರನಾಥರಿಂದ ಕಲಿತ ಕಲೆಯನ್ನು ಮೂಲೆಗಿರಿಸಿದ ಪ್ರಸಂಗವನ್ನು ಈ ಚಿತ್ರ ಸೊಗಸಾಗಿ ರೂಪಿಸುತ್ತದೆ. ಹೀಗೆ ಚಿತ್ರಕಲೆಯ ಅಭ್ಯಾಸ ಮತ್ತೆ ಮೊದಲುಗೊಂಡಿತು. 
ಜೀವನೋಪಾಯಕ್ಕೆ ಚಿತ್ರಕಲೆ ಮತ್ತಿತರ ಕಲಾ ಪ್ರಕಾರಗಳು ಮತ್ತು ವೀಣಾವಾದನ ಆತ್ಮಸಂತೋಷಕ್ಕೆ ಹೀಗೆ ವೆಂಕಟಪ್ಪನವರ ಬದುಕು ಸಾಗಿತು. ಮಹಾರಾಜರು ವೆಂಕಟಪ್ಪನವರಿಗೆ ಅರಮನೆಯಲ್ಲಿಯೇ ಉದ್ಯೋಗಾವಕಾಶವನ್ನೂ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟರು. ವೆಂಕಟಪ್ಪನವರ ನಿಷ್ಠುರ ಗುಣ ಅರಮನೆಯ ಅಧಿಕಾರಿಗಳಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಮಹಾರಾಜರಿಗೆ ಅವರ ಕುರಿತು ಅಪಾರ ಅಭಿಮಾನ. ಈ ಅವಧಿಯಲ್ಲಿ ಅವರು ಮಾಡಿ ಮುಗಿಸಿದ ಕಲಾಕೃತಿಗಳು ಲೋಕವಿಖ್ಯಾತವಾದವು. ತಮ್ಮ ದಣಿಯಾದ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರವೊಂದನ್ನು ದಂತಫಲಕದ ಮೇಲೆ ಮೂಡಿಸಿದರು; ತಮ್ಮ ಗುರುಗಳಾದ ಅವನೀಂದ್ರನಾಥ ಠಾಕೂರರ ಭಾವಚಿತ್ರವನ್ನೂ ದಂತ ಫಲಕದ ಮೇಲೆ ಬಿಡಿಸಿದರು. ವೀಣೆ ಶೇಷಣ್ಣನವರ ಫ್ಲಾಸ್ಟರ್ ಶಿಲ್ಪಕೃತಿ ಇನ್ನೊಂದು ಅದ್ಭುತ ಕೃತಿ. ಇಂಥದೇ ಇನ್ನೊಂದು ಶಿಲ್ಪ ಮಾಣಿ ನರಸಿಂಹನದು. ಇನ್ನೂ ಒಂದು ಶಿಲ್ಪ ಕವಿ ರವೀಂದ್ರನಾಥ ಠಾಕೂರರದ್ದು. ಇವಲ್ಲದೆ ಹಲವಾರು ಪ್ಲಾಸ್ಟರ್ ಶಿಲ್ಪಫಲಕಗಳನ್ನೂ ಸಿದ್ಧಪಡಿಸಿದರು. ಬರೋಡ ಮಹಾರಾಜರ ದಂತ ಚಿತ್ರವೊಂದನ್ನೂ ನಿರ್ಮಿಸಿದರು. ಅರಮನೆಗೆ ಸಂಬಂಧಿಸಿದ ಹಲವು ವಿನ್ಯಾಸಗಳನ್ನು ಉಬ್ಬುಶಿಲ್ಪದಲ್ಲಿ ಮೂಡಿಸಿದರು.
ಈ ಸುಮಾರಿಗೆ ವೆಂಕಟಪ್ಪನವರಿಗೆ ತಾವು ಓದಿದ ಕಲಾ ಶಾಲೆಯಿಂದ ಅದರ ಮುಖ್ಯಸ್ಥರಾಗಲು ಆಹ್ವಾನ ಬಂತು. ಪೆರ್ಸಿ ಬ್ರೌನ್ ನಿವೃತ್ತರಾಗುವ ಮೊದಲು, ತನ್ನ ಜಾಗವನ್ನು ತುಂಬಲು ವೆಂಕಟಪ್ಪನವರೇ ತಕ್ಕವರೆಂದು ಸರ್ಕಾರಕ್ಕೆ ಸೂಚಿಸಿದರು. ಸ್ವಲ್ಪ ನಿಷ್ಠುರ ವ್ಯಕ್ತಿಯಾಗಿದ್ದ ವೆಂಕಟಪ್ಪನವರನ್ನು ಬೀಳ್ಕೊಡಲು ಮೈಸೂರು ಅರಮನೆಯ ಅನೇಕ ಅಧಿಕಾರಿಗಳೂ ಸಿದ್ಧರಿದ್ದರು. ವೆಂಕಟಪ್ಪನವರ ಬಗ್ಗೆ ಆಪ್ತ ಗೌರವವವಿದ್ದರೂ ಅದು ಯಾವ ಹಿರಿಯ ಕಲಾವಿದನೂ ಹೆಮ್ಮೆ ಪಡುವಂಥ ದೊಡ್ಡ ಹುದ್ದೆಯ ಅವಕಾಶವಾದ್ದರಿಂದ ಮಹಾರಾಜರೂ ಅಡ್ಡಿ ಬರಲಿಲ್ಲ. ಅಂದಿನ ಯುಗದಲ್ಲಿಯೇ ತಿಂಗಳಿಗೆ ಸಾವಿರದ ಎಂಟುನೂರು ರೂಪಾಯಿಗಳ ಸಂಬಳ!
ಆದರೆ ವೆಂಕಟಪ್ಪ ಬಂಗಾಳ ಸರ್ಕಾರಕ್ಕೆ ಉತ್ತರ ಬರೆದು ಈ ಉದ್ಯೋಗವನ್ನು ತಿರಸ್ಕರಿಸಿಬಿಟ್ಟರು. ಅವರ ಉತ್ತರದ ಒಕ್ಕಣೆ ಸ್ವಾರಸ್ಯವಾಗಿದೆ "ನೀವು ನನ್ನನ್ನು ಕಲಾವಿದನೆಂದು ಕರೆದು ತಪ್ಪು ಮಾಡಿದ್ದೀರಿ. ನಾನೇನು ಕಲಾವಿದನಲ್ಲ, ಕಲಾವಿದ್ಯಾರ್ಥಿ ಅಷ್ಟೇ. ಬದುಕಿನುದ್ದಕ್ಕೂ ನಾನು ವಿದ್ಯಾರ್ಥಿಯೇ! ಕಲೆಯ ಆಳ ಅಗಲಗಳನ್ನು ತಿಳಿದುಕೊಳ್ಳುವ ಕುತೂಹಲ ನನಗುಂಟು. ಆದ್ದರಿಂದ ನಾನು ಕಲಾ ವಿದ್ಯಾರ್ಥಿಯಾಗಿಯೇ ಬಾಳನ್ನು ಕಳೆಯ ಬೇಕೆಂದಿದ್ದೇನೆ. ಕಲೆಯ ಸಾರವನ್ನು ಅರಿತುಕೊಳ್ಳುವ ಹಿರಿದಾದ ಗುರಿಯನ್ನು ನನ್ನ ಮುಂದೆ ಇರಿಸಿಕೊಂಡಿದ್ದೇನೆ. ನೀವು ನನಗೆ ನೀಡಲಿರುವ ಪ್ರಿನ್ಸಿಪಾಲ್ ಗಿರಿಯ ಉದ್ಯೋಗ ಈ ಗುರಿಯನ್ನು ಮುಟ್ಟಲು ನೆರವಾಗುವುದಿಲ್ಲ, ಅಡ್ಡಿಯಾಗುತ್ತದೆ. ಸಂಸ್ಥೆಯ ಆಡಳಿತ, ಜವಾಬ್ದಾರಿ, ಪತ್ರ ವ್ಯವಹಾರ ಇವೆಲ್ಲ ನನ್ನ ಸ್ವಭಾವಕ್ಕೆ ಸರಿಹೋಗುವುದಿಲ್ಲ. ನಾನು ಸಾಧ್ಯವಾದ ಮಟ್ಟಿಗೂ ಸ್ವತಂತ್ರ್ಯವಾಗಿರಬೇಕೆನ್ನುವವನು. ಯಾರ ಕಟ್ಟುಪಾಡಿಗೂ ಸಿಗುವವನಲ್ಲ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ!" ಹೀಗೆ ವೆಂಕಟಪ್ಪನವರು ಎಲ್ಲವನ್ನೂ ನಿರಾಕರಿಸಿ ಸ್ವತಂತ್ರರಾಗಿ ಉಳಿದುಕೊಂಡರು. 
ಮುಂದೆ ವೆಂಕಟಪ್ಪನವರು ಬೆಂಗಳೂರಿಗೆ ಬಂದು ನೆಲೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಅವರಿಗೆ ಕೆಲವು ಕಲಾಕೃತಿಗಳನ್ನು ಮಾಡಲು ಹೇಳಿದ್ದು ಅದರ ಆರ್ಥಿಕ ಮೌಲ್ಯವನ್ನೂ ನಿರ್ಧರಿಸಿದ್ದರು. ಈ ಕೃತಿಗಳು ಮುಗಿಯುವಷ್ಟರಲ್ಲಿ ಮಹಾರಾಜರು ತೀರಿಕೊಂಡರು. ಮುಂದೆ ಬಂದ ಅರಸರ ಅಧಿಕಾರಿಗಳು ಈ ಕಲಾಕೃತಿಗಳನ್ನು ಕೊಳ್ಳಲು ನಿರಾಕರಿಸಿದರು; ಅವರು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ, ಮೊದಲು ನಿರ್ಧರಿಸಿದ ಹಣದಲ್ಲಿ ತೀರ ಕೊಂಚಭಾಗವನ್ನು ಕೊಡುವೆವೆಂದರು. ಹಿಂದಿನ ಮಹಾರಾಜರ ಕೋರಿಕೆಯಂತೆ ತಾವು ಕಲಾಕೃತಿಗಳನ್ನು ಸಿದ್ಧಪಡಿಸಿದುದಾಗಿಯೂ, ಆ ಒಪ್ಪಂದವನ್ನು ಈಗ ಪಾಲಿಸದಿದ್ದರೆ ಅವರ ನೆನಪಿಗೆ ಅಪಮಾನ ಮಾಡಿದಂತೆ ಎಂದೂ ವೆಂಕಟಪ್ಪ ವಾದಿಸಿದರು. ಅರಮನೆಯ ಅಧಿಕಾರಿಗಳು ಒಪ್ಪದಿದ್ದಾಗ, ಅರಮನೆಯ ಮೇಲೆ ವೆಂಕಟಪ್ಪ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಹೂಡಿದರು.
ಆದರೆ ಆ ಕಾಲದಲ್ಲಿ ಹೀಗೆ ಅರಮನೆಯ ವ್ಯವಹಾರವನ್ನು ರಾಜ್ಯದ್ದೇ ನ್ಯಾಯಾಲಯ ವಿಮರ್ಶೆಗೆ, ಪರಿಶೀಲನೆಗೆ ಎತ್ತಿಕೊಳ್ಳುವ ಹಾಗಿರಲಿಲ್ಲ. ವೆಂಕಟಪ್ಪನವರ ಮನಸ್ಸು ಕಹಿಯಾಯಿತು; ಇನ್ನು ಮೈಸೂರಿನಲ್ಲಿರಬಾರದೆಂದು ನಿಶ್ಚಯಿಸಿ, ತಮ್ಮ ಕಲಾಕೃತಿಗಳನ್ನೆಲ್ಲ ಎತ್ತಿಕೊಂಡು ಬೆಂಗಳೂರಿಗೆ ಬಂದು ಮಲ್ಲೇಶ್ವರದ ಅಂಚಿನಲ್ಲಿ ನೆಲೆಸಿದರು. ಅರಮನೆ ತನಗೆ ಕೊಡಲು ಮುಂದೆ ಬಂದ ಹಣವನ್ನೂ ತಿರಸ್ಕರಿಸಿಬಿಟ್ಟರು. ಮತ್ತೆ ಮೈಸೂರಿಗೆ ಹೋಗಲಿಲ್ಲ; ಅರಮನೆಯ ನಂಟನ್ನು ಮುಂದುವರೆಸಲಿಲ್ಲ!
ವೆಂಕಟಪ್ಪ ಬೆಂಗಳೂರಿಗೆ ಬಂದದ್ದು 1946ರ ಜುಲೈ ತಿಂಗಳಿನಲ್ಲಿ. ಆಗ ಅವರಿಗೆ ಅರವತ್ತು ವರ್ಷ ವಯಸ್ಸು. ಒಂದು ಸುಸಜ್ಜಿತವಾದ ಕಲಾಶಾಲೆಯನ್ನು ತೆರೆಯುವ ಉದ್ದೇಶ ದಿಂದ ಅವರು ಮಲ್ಲೇಶ್ವರದ ಅಂಚಿನಲ್ಲಿ, ಪ್ರಶಾಂತವಾದ ಒಂದೆಡೆ, ವಿಶಾಲವಾದ ಜಾಗವನ್ನು ಕೊಂಡು ಅಲ್ಲಿ ಕಲಾಭ್ಯಾಸಕ್ಕೆ ತಕ್ಕಂತೆ ಮನೆಯೊಂದನ್ನು ಕಟ್ಟಿಸಿಕೊಂಡರು. ತಮ್ಮ ವಾಸಕ್ಕೆಂದೇ ಮನೆಯಾದರೂ, ತಮ್ಮೆಲ್ಲ ಕಲಾಕೃತಿಗಳನ್ನೂ ಬಯಸಿ ಬಂದವರು ನೋಡುವ ಸಲುವಾಗಿ ‘ಪ್ರದರ್ಶನ ಶಾಲೆ’ಯನ್ನೂ ಅಲ್ಲಿ ಅಳವಡಿಸಿದರು. ಮೇಲೆ ಎರಡು ಅಂತಸ್ತುಗಳಲ್ಲಿ ಸಂಗೀತ ವಾದ್ಯಶಾಲೆ, ಕಲಾ ಶಿಕ್ಷಣಶಾಲೆಗಳನ್ನು ವ್ಯವಸ್ಥೆ ಮಾಡುವ ಯೋಚನೆಯಿಂದ ಯೋಜನೆಯೊಂದನ್ನು ಸಿದ್ಧಪಡಿಸಿದರು. ಈ ಯೋಜನೆ ಬರಿಯ ಯೋಜನೆಯಾಗಿ ಉಳಿಯಿತು! 
ಪ್ರೊ. ಎಸ್. ಕೆ. ರಾಮಚಂದ್ರ ರಾವ್ ಅವರು ವೆಂಕಟಪ್ಪನವರ ಬಳಿ ಕಲಿಯಲು ಆಸಕ್ತಿ ವ್ಯಕ್ತಪಡಿಸಿದಾಗ ಪೂರ್ಣ ಅದಕ್ಕೇ ಬದ್ಧರಾದರೆ ಮಾತ್ರಾ ಶಿಷ್ಯತ್ವ ನೀಡುವುದಾಗಿ ಹೇಳಿದರಂತೆ. ಬಹುಮಖಿ ಚಟುವಟಿಕೆಗಳನ್ನು ಹೊಂದಿದ್ದ ರಾಮಚಂದ್ರರಾಯರು ಹಾಗೆ ಶಿಷ್ಯತ್ವ ಪಡೆಯಲು ಸಾಧ್ಯವಾಗದೆ ವೆಂಕಟಪ್ಪನವರ ಕೆಲಸವನ್ನು ತನ್ಮಯತೆಯಿಂದ ಆಗಾಗ ಕಾಣುತ್ತಿದ್ದರಂತೆ.
ವೆಂಕಟಪ್ಪನವರು ಬೆಂಗಳೂರಿನ ಮನೆಯಲ್ಲಿ ವಾಸಮಾಡತೊಡಗಿದ ಮೇಲೆ ಹೆಚ್ಚು ಹೊಸಕೃತಿ ಮಾಡುವ ಗೋಜಿಗೆ ಹೋಗಲಿಲ್ಲವಂತೆ. ಜನರಲ್ಲಿದ್ದ ಅನಾದರ, ಸರ್ಕಾರದ ಆಲಸ್ಯ, ಕಲಾವಿದರೆನಿಸಿಕೊಂಡವರ ಮಾತ್ಸರ್ಯ ಇವುಗಳಿಂದ ಬೇಸರಗೊಂಡರಂತೆ. ಮೊದಲೇ ಸ್ವತಂತ್ರವಾಗಿದ್ದ ಅವರ ಮನೋವೃತ್ತಿ ಮತ್ತಷ್ಟು ನಿಷ್ಠುರವಾಯಿತೆಂದು ಹಲವರ ಅಂಬೋಣ. ಒಂಟಿಯಾಗಿಯೇ ಉಳಿದಿದ್ದ ಅವರು ಈಗ ಇತರರ ಸಂಪರ್ಕವನ್ನೂ ದೂರವಿರಿಸಿದರು.
ಬೆಂಗಳೂರಿನಲ್ಲಿ ಇಷ್ಟು ವಿಖ್ಯಾತರಾದ, ಪ್ರತಿಭಾಶಾಲಿಯಾದ ಕಲಾವಿದನೊಬ್ಬನಿದ್ದಾರೆ ಎನ್ನುವುದೇ ಬಹಳ ಮಂದಿಗೆ ತಿಳಿಯದಂತೆ ಇಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಅವರು ವಾಸಮಾಡಿದರು. ಕಡೆಯ ದಿನಗಳಲ್ಲಿ ಅನಾರೋಗ್ಯ ಕಾಡಿತು.. ಸರ್ಕಾರ ಅವರನ್ನು ಹಿರಿಯ ಕಲಾವಿದರೆಂದು ಪರಿಗಣಿಸಿತು. ಕೇಂದ್ರದ ಲಲಿತಕಲಾ ಅಕಾಡೆಮಿ ಅವರನ್ನು ಮಹಾಪುರುಷರೆಂದು ಸನ್ಮಾನಿಸಿತು. ಅವರ ನಿಧನಾನಂತರ ಇವರ ಹೆಸರಿನಲ್ಲಿ ಚಿತ್ರಕಲಾ ಸಂಗ್ರಹ ಶಾಲೆ (ಆರ್ಟ್ ಗ್ಯಾಲರಿ)ಯನ್ನು ವ್ಯವಸ್ಥೆ ಮಾಡಿತು. 
ವೆಂಕಟಪ್ಪನವರನ್ನು ತಿಳಿದವರು ‘ಕಲಾತಪಸ್ಸಿ’ ಎಂದು ಕರೆದರು. ಅವರು 1965ರ ಮೇ 25ರಂದು ಬೆಂಗಳೂರಿನಲ್ಲಿ ನಿಧನರಾದರು.


 Courtesy :ಕನ್ನಡ ಸಂಪದ Kannada Sampada (FB)


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img