logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  03-Dec-2023
" ನಂದಲಾಲ್ ಬೋಸ್ " On the birth anniversary of great artiste Nandalal Bose

ನಂದಲಾಲ್ ಬೋಸ್ - On the birth anniversary of great artiste Nandalal Bose
ನಂದಲಾಲ್ ಬೋಸ್ ಶ್ರೇಷ್ಠ ಕಲಾವಿದರು. ಪ್ರಕೃತಿಯ ಮಡಿಲಲ್ಲಿ ಬೆಳೆದ ನಂದಲಾಲ್ ಬೋಸ್ ಅವರಿಗೆ ಸಪ್ತ ವರ್ಣಗಳೂ ಪ್ರಿಯವಾದವು. ಬೆಳಗು – ಸಂಜೆ, ನದಿ – ಬೆಟ್ಟ, ಪಕ್ಷಿ – ಪ್ರಾಣಿ ಅವರನ್ನು ಬೆರಗುಗೊಳಿಸುತ್ತಿದ್ದವು. ದೊಡ್ಡ ಕುಟುಂಬದಲ್ಲಿ ಬೆಳೆದು ಸಹೃದಯತೆಯನ್ನು ಪಡೆದ ಅವರಿಗೆ ಜೀವನದ ಸಪ್ತ ಸ್ವರಗಳೂ ಪ್ರಿಯವಾದವು. ಇತರರ ಸುಖ ದುಃಖಗಳಲ್ಲಿ ಪಾಲುಗೊಳ್ಳುವ ಮಾನವೀಯ ದೃಷ್ಟಿ ಅವರಲ್ಲಿ ಬೆಳೆಯಿತು. ನಂದಲಾಲ್ ಬೋಸ್ ಅವರ ತಾತ ಮುತ್ತಾತ ಬಣಿಪುರ ಎಂಬ ಹಳ್ಳಿಗೆ ಸೇರಿದವರು. ಅದು ಕಲ್ಕತ್ತದಿಂದ ಹತ್ತು ಮೈಲಿ ದೂರದಿಂದ ಹೂಗ್ಲಿ ನದಿಯ ಪಶ್ಚಿಮ ದಂಡೆಯ ಮೇಲಿದೆ. ಅವರ ಮುತ್ತಾತ ಕೃಷ್ಣ ಮೋಹನರ ಕಾಲದಲ್ಲಿ ಅವರ ಮನೆ ಐಶ್ವರ್ಯದಿಂದ ತುಂಬಿತ್ತು. ಆಮೇಲೆ ಲಕ್ಷ್ಮಿಯ ಕಟಾಕ್ಷ ತಪ್ಪಿತು. ನಂದಲಾಲ್ ಬೋಸ್ ಅವರ ತಂದೆ ಪೂರ್ಣಚಂದ್ರ ಬೋಸ್ ದರ್ಭಾಂಗ ಸಂಸ್ಥಾನದ ಆಡಳಿತದಲ್ಲಿ ಕೆಲಸ ಮಾಡುತ್ತಿದ್ದರು. ಬಿಹಾರದ ಮಾಂಘೀರ್ ಜಿಲ್ಲೆಯ ಖರಗಪುರದಲ್ಲಿ 1883ರ ಡಿಸೆಂಬರ್ 3ರಂದು ನಂದಲಾಲ್ ಬೋಸ್ ದೊಡ್ಡ ಕುಟುಂಬದಲ್ಲಿ ಹುಟ್ಟಿದರು. ಅವರ ತಾಯಿ ಕ್ಷೇತ್ರ ಮಣಿದೇವಿ ನಂದಲಾಲ್ ಬೋಸರನ್ನು ಎಂಟನೇ ವಯಸ್ಸಿನಲ್ಲೇ ಅಗಲಿದರೂ, ಮಗನ ಮೇಲೆ ಆಕೆಯ ಪ್ರಭಾವ ಗಾಢವಾಗಿತ್ತು.


ಖರಗಪುರ ಪುಟ್ಟಹಳ್ಳಿ. ಅದರ ಪ್ರಕೃತಿಯ ಸೌಂದರ್ಯ ನಂದಲಾಲ್ ಬೋಸರ ಎಳೆ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಹಳ್ಳಿಯನ್ನು ಎರಡು ಸೀಳೂ ಮಾಡುವ ಮಣಿ ನದಿ. ದಕ್ಷಿಣ ಭಾಗ ಬಿಟ್ಟು ಸುತ್ತಲೂ ನೀಲಿಮಯವಾದ ಬೆಟ್ಟದ ಸಾಲು. ಸುತ್ತಲೂ ಋತುವಿನಿಂದ ಋತುವಿಗೆ ಹೊಸ ಉಡುಗೆ ಧರಿಸುವ ಭತ್ತದ ಗದ್ದೆಗಳು, ನದಿ, ಸರೋವರ, ಬೆಟ್ಟ, ಕಾಡು, ಪಕ್ಷಿ, ಪ್ರಾಣಿ, ಈ ಹಿನ್ನೆಲೆಯಲ್ಲಿ ನಂದಲಾಲ್ ಬೋಸರ ಅಂತಃಕರಣ ಸಹಜವಾಗಿಯೇ ಕಲೆಗೆ ಒಲಿಯಿತು. ಪೂರ್ಣಚಂದ್ರ ಬೋಸರ ಕುಟುಂಬ ದೊಡ್ಡದು. ಅದು ನೂರು ಜನರ ಅವಿಭಕ್ತ ಕುಟುಂಬ. ಅವರಲ್ಲಿ ಬೋಸರ ಸ್ವಂತ ಕುಟುಂಬದವರೇ ಇಪ್ಪತ್ತು ಮಂದಿ. ತಾಯಿ ಕ್ಷೇತ್ರಮಣಿದೇವಿ ಸಂಪ್ರದಾಯಸ್ಥಳು. ದೇವರ ಪೂಜೆ, ಹಬ್ಬ ಹರಿದಿನಗಳ ಆಚರಣೆಯಲ್ಲಿ ಬಹಳ ಶ್ರದ್ಧೆ, ಕುಶಲ ಕಲೆಗಳಲ್ಲಿ ಒಲವು. ಮಗ ನಂದಲಾಲ್ ಬೋಸ್ ತಾಯಿಯ ಕಸೂತಿ ಕೆಲಸವನ್ನು, ಆಕೆ ಬೊಂಬೆಗಳನ್ನು ಮಾಡುವುದನ್ನು ಸಕ್ಕರೆ ಅಚ್ಚು ಹಾಕುವುದನ್ನು ರಂಗವಲ್ಲಿಯಲ್ಲಿ ಚಿತ್ರ ಬಿಡಿಸುವುದನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ. ಅವನ ಕಣ್ಣುಗಳೆದುರಲ್ಲೇ ಸೌಂದರ್ಯ ಆಕಾರ ಪಡೆಯುವುದನ್ನು ಕಂಡು ನಂದಲಾಲ್ ಬೋಸ್ ಪುಳಕಗೊಳ್ಳುತ್ತಿದ್ದ. ತಾಯಿಯಿಂದ ಬಂಗಾಳಿಯ ಜೊತೆಗೆ ರೇಖಾ ವಿನ್ಯಾಸವೂ ಮಾತೃಭಾಷೆಯಾಗಿ ಅವನಿಗೆ ಲಭಿಸಿತು.
ತಂದೆ ಪೂರ್ಣ ಚಂದ್ರ ಬೋಸ್ ತುಂಬ ಶಿಸ್ತಿನ ಮನುಷ್ಯ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅವರ ಅಚ್ಚುಕಟ್ಟಿನ ಜೀವನಕ್ಕೆ ಅವರು ತಪ್ಪದೆ ಬರೆಯುತ್ತಿದ್ದ ದಿನಚರಿ ಸಾಕ್ಷಿ. ತಾಯಿ ಕ್ಷೇತ್ರಮಣಿ ಅವರದು ಮುಗ್ಧ ಸ್ವಭಾವ. ಸುಸಂಸ್ಕೃತವಾದ ನಡವಳಿಕೆ. ಎಲ್ಲರಲ್ಲೂ ಅಂತಃಕರಣ ತೋರುವ ಚೇತನ.ಓದು ಬರಹಕ್ಕಿಂತ ನಂದಲಾಲ್ ಬೋಸರ ಒಲವು ಸೌಂದರ್ಯದ ಸೃಷ್ಟಿಯಲ್ಲೇ ಹೆಚ್ಚು ತರಗತಿಯಲ್ಲಿ ಕುಳಿತಾಗ ಅವರ ದೃಷ್ಟಿ ಕಿಟಕಿಯನ್ನು ಹಾದು ಬತ್ತದ ಬಯಲು, ಆಕಾಶ, ಬೆಟ್ಟ ಹಕ್ಕಿಗಳನ್ನು ಅರಸುತ್ತಿತ್ತು. ಪ್ರಾಣಿಗಳೆಂದರೆ ತುಂಬ ಪ್ರೀತಿ, ಅವುಗಳನ್ನು ಸಾಕುವುದರಲ್ಲಿ ವಿಶೇಷ ಆಸಕ್ತಿ. ಕಲೆಗೆ ಒಲಿದ ಬಾಲಕ, ಮಣ್ಣು ಕಲ್ಲುಗಳಲ್ಲಿ ಬೊಂಬೆಗಳನ್ನು ಸೃಷ್ಟಿಸುವುದನ್ನು ಗಂಟೆಗಟ್ಟಲೆ ನೋಡಿದರೂ ನಂದಲಾಲ್ ಬೋಸರಿಗೆ ತೃಪ್ತಿ ಇಲ್ಲ. ಬೊಂಬೆ ತಯಾರಿಸುವವರೊಡನೆ ಸ್ನೇಹ ಬೆಳೆಸಿ, ಸ್ವತಃ ಬೊಂಬೆಗಳನ್ನು ಸೃಷ್ಟಿಸಲು ಪ್ರಯತ್ನ ಮಾಡಿ, ಸೌಂದರ್ಯ ಆಕಾರ ಪಡೆದಾಗ ಮೈನವಿರೇಳುವ ಅನುಭವ ಪಡೆಯುತ್ತಿದ್ದರು.ಒಬ್ಬ ಹುಚ್ಚ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿದ್ದ. ಬರೆಯಲು ಕಾಸು ಕೊಡಬೇಕಾಗಿತ್ತು. ಒಮ್ಮೆ ನಂದಲಾಲ್ ಬೋಸ್ ಮೂರು ಕಾಸು ಕೊಟ್ಟು ಚಿತ್ರ ಬರೆಯಲು ಹೇಳಿದರು. ಎರಡು ರೇಖೆ ಎಳೆದು ನಿಲ್ಲಿಸಿದ. ಯಾಕೆ? ’ಮೂರು ಕಾಸಿಗೆ ಇಷ್ಟೇ’ ಎಂದ ಆ ಹುಚ್ಚ ಮೂರು ಮೂರು ಕಾಸುಗಳನ್ನು ಕೊಟ್ಟಂತೆ ಚಿತ್ರ ಮುಂದುವರಿಯಿತು. ಚಿತ್ರ ಮುಗಿದಾಗ ನಂದಲಾಲ್ ಬೋಸರಿಗೆ ಆದ ಆನಂದ ಅಷ್ಟಿಷ್ಟಲ್ಲ. ಆ ಹುಚ್ಚ ಬರೆದ ಚಿತ್ರ ಹುಡುಗ ನಂದಲಾಲ್ ಬೋಸರ ಚಿತ್ರ. ಅವನು ಉಪಯೋಗಿಸಿದ ಬಣ್ಣ ಇಲ್ಲಣ ಮತ್ತು ನೀರು. ಚಿಂದಿ ಬಟ್ಟೆ ತುಂಡು ಅವನ ಕುಂಚ. ಮುಂದೆ ನಂದಲಾಲ್ ಬೋಸರು ಈ ತಂತ್ರವನ್ನು ಶಾಂತಿ ನಿಕೇತನದಲ್ಲಿ ಚೀನಾ ಭವನದ ’ನಟಿರ್ ಪೂಜಾ’ ಫ್ರೆಸ್ಕೋ ಚಿತ್ರಮಾಲೆಗೆ ಉಪಯೋಗಿಸಿಕೊಂಡರು (ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುವ ಒಂದು ವಿಧಾನ ಫ್ರೆಸ್ಕೋ). ಖರಗಪುರ ಹಳ್ಳಿಯಾದರೂ ಪ್ರಾಮುಖ್ಯತೆ ಪಡೆದಿತ್ತು. ಹತ್ತಿರ ಎಂದರೆ ಹನ್ನೆರಡು ಮೈಲಿ ದೂರದಲ್ಲಿದ್ದ ಬರಿಯಾರ್ ಪುರ ರೈಲ್ವೆ ನಿಲ್ದಾಣ. ಖರಗಪುರ ರೈಲ್ವೆ ನಿಲ್ದಾಣ ಮಾರ್ಗದಲ್ಲಿದ್ದ ಕಾರಣ ಬರುವ ಹೋಗುವ ಜನ ಇರುತ್ತಿದ್ದರು. ಕೆಲವರು ಕುದುರೆ ಸವಾರಿ ಮಾಡುತ್ತಿದ್ದರು. ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದರು ಕೆಲವರು. ಮನುಷ್ಯರೇ ಎಳೆದುಕೊಂಡು ಹೋಗುತ್ತಿದ್ದ ಗಾಡಿಗಳೂ ಇದ್ದವು. ಅಲ್ಲದೆ ಸರಕಾರಿ ಕೆಲಸದ ನಿಮಿತ್ತ ವ್ಯಾಪಾರಿಗಳು, ಕಾರ್ಮಿಕರು ಬರುತ್ತಿದ್ದರು. ನಂದಲಾಲ್ ಬೋಸರಿಗೆ ಜನಜೀವನದ ಈ ದೃಶ್ಯಗಳು ಬಣ್ಣಗಳಲ್ಲಿ ಬಿಡಿಸಿದ ಚಿತ್ರಗಳಂತೆ ಕಾಣುತ್ತಿದ್ದವು.
ಬಣ್ಣದ ಚಿತ್ರಗಳೆಂದರೆ ನಂದಲಾಲ್ ಬೋಸರಿಗೆ ತುಂಬ ಇಷ್ಟ. ಅಂಥ ಚಿತ್ರಗಳಿಗಾಗಿ ಹಳೆ ಪುಸ್ತಕಗಳನ್ನು ಪತ್ರಿಕೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಆ ಚಿತ್ರಗಳನ್ನು ಪ್ರತಿ ಮಾಡುವುದು ಅವರ ಚಿತ್ರ ಕಲೆಯ ಅಭ್ಯಾಸಕ್ಕೆ ನಾಂದಿಯಾಯಿತು. ತರಗತಿಯಲ್ಲಿ ಕುಳಿತಾಗ ಟಿಪ್ಪಣಿಯ ಬದಲು ಚಿತ್ರ ಬರೆಯುತ್ತಿದ್ದರಂತೆ. ವರ್ಡ್ಸ್ವರ್ತ್ ಕವಿಯ ಪಾಠ ನಡೆಯುತ್ತಿದ್ದಾಗ ಕವನದ ಅಂಚಿನಲ್ಲಿ ಕವಿಯ ಪ್ರತಿಮೆಗಳನ್ನು ಚಿತ್ರಗಳಲ್ಲಿ ರೂಪಿಸಿದರಂತೆ. ಹಿತೋಪದೇಶದ ಕಥೆಗಳನ್ನು ಬಣ್ಣಗಳಲ್ಲಿ ಚಿತ್ರ ಬಿಡಿಸಿದ್ದುಂಟು. ತರಗತಿಯ ಪಾಠ ಪ್ರವಚನಗಳು ನಂದಲಾಲ್ ಬೋಸರಿಗೆ ನೀರಸವೆನ್ನಿಸುತ್ತಿದ್ದವು. ಇಂಥ ವಿಷಯ ಪ್ರಿಯ ಅಥವಾ ಅಪ್ರಿಯ ಎಂಬುದಕ್ಕಿಂತ, ಅಲ್ಲಿ ಅವರ ಮನಸ್ಸಿನ ಕಣ್ಣನ್ನು ಸೆಳೆಯುವಂಥದು ಏನಾದರೂ ಇತ್ತೇ ಎಂಬುದು ಮುಖ್ಯ. ಗಣಿತ ಅವರಿಗೆ ಬೇಸರ ತರುತ್ತಿತ್ತು. ಆದರೂ ಮುಂದೆ ಕಲ್ಕತ್ತೆಯಲ್ಲಿ ಓದುತ್ತಿದ್ದಾಗ ಅವರು ಗಣಿತದ ಪಾಠವನ್ನು ಒಮ್ಮೆಯೂ ತಪ್ಪಿಸಿಕೊಳ್ಳದಿರಲು ಕಾರಣ ಗಣಿತದ ಉಪಾಧ್ಯಾಯ ಗೌರಿಶಂಕರ ಡೇ. ಅವರ ವ್ಯಕ್ತಿತ್ವ ನಂದಲಾಲ್ ಬೋಸರನ್ನು ಆಕರ್ಷಿಸುತ್ತಿತ್ತು. ಅವರು ಉಡುಗೆ, ಮಾತು, ನಡವಳಿಕೆ, ಎಲ್ಲದರಲ್ಲೂ ಒಪ್ಪ. ತಲೆಗೂದಲು ಬೆಳ್ಳಗಾಗಿತ್ತು. ಕತ್ತನ್ನು ಮುಚ್ಚುವ ಕೋಟು, ಮಂಡಿಯಿಂದ ಒಂದೋ ಎರಡೋ ಅಂಗುಲ ಕೆಳಗೆ ಬರುತ್ತಿದ್ದ ಶುಭ್ರವಾದ ಬಿಳಿ ಪಂಚೆ. ಘನತೆ ಗಾಂರ್ಭೀಯದ ಮೂರ್ತಿ. ನಂದಲಾಲ್ ಬೋಸರಿಗೆ ಗಣಿತದಲ್ಲಿಲ್ಲದ ಆಕರ್ಷಣೆ ಗುರುವಿನಲ್ಲಿತ್ತು. ಮಾತೃಭಾಷೆ ಬಂಗಾಳಿ, ಆದರೆ ಶಾಲೆಯಲ್ಲಿ ಪಾಠ ಕಲಿಯುತ್ತಿದ್ದುದು ಹಿಂದಿಯಲ್ಲಿ ಎಳೆ ವಯಸ್ಸಿನಲ್ಲೇ ಹಿಂದಿಯನ್ನು ಕಲಿತ ಕಾರಣ, ಅದು ನಂದಲಾಲ್ ಬೋಸರ ವ್ಯಕ್ತಿತ್ವದಲ್ಲಿ ಸೇರಿಕೊಂಡಿತು. ತುಂಬ ಸಂತೋಷ, ದುಃಖ ಆದಾಗ ಅದು ವ್ಯಕ್ತವಾಗುತ್ತಿದ್ದುದು ಬಂಗಾಳಿಯಲ್ಲಲ್ಲ, ಹಿಂದಿಯಲ್ಲಿ. ಹಳೆ ಮಿತ್ರರೊಡನೆ ಸಂಭಾಷಿಸುತ್ತಿದ್ದುದು ಹಿಂದಿಯಲ್ಲಿ. ಆಮೇಲೆ ಮಕ್ಕಳಿಗೆ ಮೊಮ್ಮಕ್ಕಳಿಗೆ ಕಥೆ ಹೇಳುತ್ತಿದ್ದುದು ಹಿಂದಿಯಲ್ಲಿ. ಸಣ್ಣಪುಟ್ಟ ಭೇದಭಾವನೆಗಳು ನಂದಲಾಲ್ ಬೋಸರನ್ನು ಬಂಧಿಸಲಾರವು. ಗುರು-ಶಿಷ್ಯ, ಉಚ್ಛ -ನೀಚ, ಇಂಥ ಎಣಿಕೆಗಳು ಅವರಿಗೆ ತಿಳಿಯದು.
ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ನಂದಲಾಲ್ ಬೋಸ್ ಕಲ್ಕತ್ತೆಗೆ ಹೊರಟರು. ಆಗ ಅವರ ವಯಸ್ಸು ಹದಿನೈದು. ಸೆಂಟ್ರಲ್ ಕೊಲಿಜಿಯೇಟ್ ಸ್ಕೂಲ್ನಲ್ಲಿ ’ಎಂಟ್ರೆನ್ಸ್’ ಪರೀಕ್ಷೆಯನ್ನು ಮುಗಿಸಿದರು. ಮುಂದೆ ಎಫ್.ಎ. ಪರೀಕ್ಷೆ ಓದಲು ಜನರಲ್ ಅಸೆಂಬ್ಲಿ ಕಾಲೇಜ್ ಸೇರಿದರು. ಅವರ ಮನಸ್ಸೆಲ್ಲ ಕಲೆಯಲ್ಲಿ ಕೇಂದ್ರೀಕೃತವಾಗಿತ್ತು. ಅವರ ಕಾಲ, ಶ್ರಮ, ಎಲ್ಲವೂ ಶ್ರೇಷ್ಠ ಕಲಾವಿದರ ಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನೂ, ಪತ್ರಿಕೆಗಳನ್ನೂ ಸಂಗ್ರಹಿಸುವುದರಲ್ಲಿ ವ್ಯಯವಾಗುತ್ತಿತ್ತು. ಫೀ ಕಟ್ಟಬೇಕಾದ ಹಣವನ್ನೂ ಕಲೆಯ ಉದ್ದೇಶಕ್ಕೆ ಖರ್ಚು ಮಾಡುತ್ತಿದ್ದುದುಂಟು. ಅಲ್ಲದೆ ಅವರ ಹಾತಿಭಾಗ್ನ ನಿವಾಸದಲ್ಲಿ ಪಕ್ಷಿಗಳನ್ನು ಪ್ರಾಣಿಗಳನ್ನು ತುಂಬ ಮುದ್ದಿನಿಂದ ಸಾಕುತ್ತಿದ್ದರು. ಎಫ್.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಮೆಟ್ರೊ ಪಾಲಿಟನ್ ಕಾಲೇಜ್ ಸೇರಿದರು. ಅಲ್ಲಿಯೂ ಜಯ ಲಭಿಸಲಿಲ್ಲ. ಆದರೆ ಪರೀಕ್ಷೆಯ ಜಯ ಅಪಜಯ ಅವರಿಗೆ ಕಲೆಯಲ್ಲಿದ್ದ ಉತ್ಸಾಹವನ್ನು ಕಡಿಮೆ ಮಾಡಲಿಲ್ಲ. ಕಲ್ಕತ್ತ ನಗರದ ಸದ್ದು ಗದ್ದಲದಿಂದ ತಪ್ಪಿಸಿಕೊಳ್ಳಲು ನಂದಲಾಲ್ ಬೋಸರು ನಡು ನಡುವೆ ಬಣಿಪುರಕ್ಕೆ ಹೋಗುತ್ತಿದ್ದರು. ಬಣಿಪುರವೂ ಮಾರ್ಪಾಡಾಗುತ್ತಿರುವುದು ಅವರ ಗಮನವನ್ನು ಸೆಳೆಯಿತು. ಹೊಸದಾಗಿ ಸ್ಥಾಪಿತವಾದ ಸೆಣಬಿನ ಕಾರ್ಖಾನೆ ಅವರಿಗೆ ಪ್ರಿಯವೆನಿಸಿದ್ದ ಪ್ರಕೃತಿ ಚಿತ್ರದ ಸೌಂದರ್ಯವನ್ನು ಕೆಡಿಸಿತ್ತು. ಅವರ ಅಂತಃಕರಣವನ್ನು ಕಲಕಿದ ಮತ್ತೊಂದು ಅಂಶ ಕೂಲಿಗಾರರ ಶೋಷಣೆ. ಕೂಲಿಯವರು ವಾಸ ಮಾಡುವ ಪ್ರದೇಶಗಳಿಗೆ ಹೋಗಿ ಅವರ ಬದುಕಿನ ಚಿತ್ರವನ್ನು ನೋಡಿ ಮರುಗುತ್ತಿದ್ದರು. ಕೈಗಾರಿಕಾ ಶೋಷಣೆಯ ಜೊತೆಗೆ ವಿದೇಶಿ ರಾಜಕೀಯ, ಜಾತೀಯತೆಯ ಹಾವಳಿ ಬೇರೆ. ಈ ಪ್ರಕ್ಷುಬ್ದ ವಾತಾವರಣದಲ್ಲಿ ನಂದಲಾಲ್ ಬೋಸರ ಒಲವು ಬಂಗಾಳದ ಕ್ರಾಂತಿಕಾರರ ಕಡೆ ಸಹಜವಾಗಿಯೇ ತಿರುಗಿತು. ಗೆಳೆಯ, ಸಂಬಂಧಿ ಹಾಗೂ ಅರವಿಂದರ ಅನುಯಾಯಿಯಾದ ದೇವವ್ರತ ಬೋಸ್ ಆಗಿಂದಾಗ್ಗೆ ನಂದಲಾಲ್ ಬೋಸರನ್ನು ಕಂಡು ಅವರ ಮೇಲೆ ಪ್ರಭಾವ ಬೀರಿದರು. ಅವರ ಇಪ್ಪತ್ತನೆಯ ವಯಸ್ಸಿನಲ್ಲಿ, ವಿದ್ಯಾಭ್ಯಾಸಮುಂದುವರಿಯುತ್ತಿರುವಂತೆಯೇ, ನಂದಲಾಲ್ ಬೋಸರ ಮದುವೆಯಾಯಿತು. ಸುಧೀರಾ ದೇವಿ ಪ್ರಕಾಶ ಚಂದ್ರಪಾಲ್ ಅವರ ಮಗಳು ಚೆಲುವೆ. ಪಾಲ್ ಶ್ರೀಮಂತರು. ಬೋಸ್ ಅವರ ಮನೆ ಮಣಿ ನದಿಯ ಈಚೆ. ಪಾಲ್ ಅವರ ಮನೆ ಆಚೆ. ಮದುವೆಯಾದ ಮೇಲೆ ನಂದಲಾಲ್ ಬೋಸರ ವಿದ್ಯಾಭ್ಯಾಸದಲ್ಲಿ ಅವರ ಮಾವ ಶ್ರದ್ಧೆ ವಹಿಸಿದರು. ತಮ್ಮ ಅಳಿಯ ಡಾಕ್ಟರ್ ಆಗಬೇಕೆಂಬುದು ಅವರ ಇಚ್ಛೆ ಬೋಸರಿಗೆ ಅದು ಹಿಡಿಸಲಿಲ್ಲ. ಕಡೆಗೆ ಪ್ರೆಸಿಡೆನ್ಸಿ ಕಾಲೇಜ್ ಸೇರಿದರು. ಬಣ್ಣಗಳಿಗೆ ಸೋತ ಮನಸ್ಸು ಬೇರೆ ವಿಷಯಗಳ ಅಧ್ಯಯನಕ್ಕೆ ತಿರುಗಲಿಲ್ಲ. ಚಿತ್ರಗಳು ಬಣ್ಣ ಕಾಗದ ಈ ವರ್ತುಲದಲ್ಲಿ ಅವರ ಆಸಕ್ತಿ ಸಿಲುಕಿತ್ತು.ನಂದಲಾಲ್ ಬೋಸರು ಚಿತ್ರಕಲೆಯನ್ನು ಕಲಿಯಲು ಅವಿರತವಾಗಿ ಪ್ರಯತ್ನಿಸುತ್ತಿದ್ದರು. ತಮ್ಮ ಸೋದರ ಸಂಬಂಧಿ ಅತುಲ ಮಿತ್ರನಿಂದ ಹಲವು ಬಗೆಗಳ ಚಿತ್ರರಚನೆಯನ್ನು ಕಲಿತರು. ಸುಪ್ರಸಿದ್ದ ಐರೋಪ್ಯ ಕಲಾವಿದರ ಚಿತ್ರಗಳನ್ನು ಪ್ರತಿ ಮಾಡಿದರು. ಹಾಗೆ ಪ್ರತಿ ಮಾಡಿದ ಚಿತ್ರಗಳಲ್ಲಿ ರಾಫೆಲ್ರ ಮೆಡೋನ, ರಾಜಾ ರವಿವರ್ಮ ಅವರ ಚಿತ್ರಗಳ ಬಗ್ಗೆ ನಂದಲಾಲ ಬೋಸರಿಗೆ ಬಹಳ ಉತ್ಸಾಹ. ಆಗ ಅವರು ಸ್ವತಂತ್ರವಾಗಿ ಬರೆದ ’ಮಹಾಶ್ವೇತೆ’ ಈ ಪ್ರಭಾವವನ್ನು ತೋರಿಸುತ್ತದೆ. ಚಿತ್ರಕಲಾ ಪ್ರಪಂಚದಲ್ಲಿ ತಮ್ಮ ದಾರಿಯನ್ನು ಹುಡುಕುವ ಈ ಸ್ಥಿತಿಯಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಬೆಳಕನ್ನು ತೋರಿದ್ದು ಆಗ ತಾನೆ ಅಬನೀಂದ್ರನಾಥ ಠಾಕೂರರು ರಚಿಸಿದ ’ಬುದ್ಧ ಮತ್ತು ಸುಜಾತ', 'ವಜ್ರ ಮುಕುಟ’. ಆ ಚಿತ್ರಗಳನ್ನು ನೋಡಿ ನಂದಲಾಲ್ ಬೋಸರಿಗೆ ಆನಂದವಾದುದಷ್ಟೆ ಅಲ್ಲ, ಗುರುವಿನ ದರ್ಶನವೂ ಆಯಿತು. ದೊಡ್ಡ ಶಿಷ್ಯವೃಂದವನ್ನು ಪಡೆದ ಅಬನೀಂದ್ರನಾಥ ಠಾಕೂರರು ಆಧುನಿಕ ಚಿತ್ರಕಲೆಯ ಪುನರುತ್ಥಾನದಲ್ಲಿ ಅಗ್ರಸ್ಥಾನ ಪಡೆದವರು. ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಪಡೆದಂತೆ, ನಂದಲಾಲ್ ಬೊಸರು ಅಬನೀಂದ್ರನಾಥ ಠಾಕೂರರನ್ನು ಪಡೆದರು. ಅಬನೀಂದ್ರನಾಥ ಠಾಕೂರರು ದಯಾಳು ಎಂದು ನಂದಲಾಲ್ ಬೋಸ್ ಕೇಳಿದ್ದರು. ಗುರುವಿನ ಬಳಿಗೆ ಹೋಗಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಕೇಳಬೇಕು. ನೇರವಾಗಿ ಒಬ್ಬನೇ ಹೋಗಲು ಸಂಕೋಚ. ಸಹಪಾಠಿ ಸತ್ಯೇನ್ ಎಂಬಾತ ಜೊತೆಗೆ ಬರಲು ಒಪ್ಪಿದ. ಅಬನೀಂದ್ರನಾಥ ಠಾಕೂರರಲ್ಲಿ ಸತ್ಯೇನ್ ಬಿನ್ನವಿಸಿಕೊಂಡ ’ತಾವು ಇವನನ್ನು ಖಂಡಿತ ಶಿಷ್ಯನನ್ನಾಗಿ ತೆಗೆದುಕೊಳ್ಳಬೇಕು.’ ಅವರು ನಂದಲಾಲ್ ಬೋಸರನ್ನು ದೃಷ್ಟಿಸಿ ನೋಡಿದರು. ಇಪ್ಪತ್ತೊಂದು ದಾಟಿದ ತರುಣ. ತೆಳುವಾಗಿ, ಗುಂಗುರು ಗುಂಗುರು ಕೂದಲುಳ್ಳ ಮುದ್ದಾದ ಮುಖ. ಕಣ್ಣಿನಲ್ಲಿ ಹೊಳಪು. ಮನಸ್ಸು ಒಮ್ಮೆಲೇ ಒಪ್ಪಿದರೂ, ಅಬನೀಂದ್ರನಾಥ ಠಾಕೂರರು ತುಂಟತನಕ್ಕಾಗಿ, ’ಸ್ಕೂಲಿಗೆ ಚಕ್ಕರೆ ಹೊಡೆದು ಬಂದಿದ್ದೀಯೋ?” ಎಂದು ಕೇಳಿದರು. ಕೈಯಲ್ಲಿ ಕಾಗದ ಪತ್ರಗಳ ಕಟ್ಟನ್ನು ಹಿಡಿದುಕೊಂಡ ನಂದಲಾಲ್ ಬೋಸ್ ನಡುಗುತ್ತಲೇ ಉತ್ತರ ಕೊಟ್ಟರು.: ’ದಯವಿಟ್ಟು ಕ್ಷಮಿಸಿ, ನಾನು ಕಾಲೇಜು ವಿದ್ಯಾರ್ಥಿ,’ ’ಎಲ್ಲಿ ಸರ್ಟಿಫಿಕೇಟ್ ತೋರಿಸು’ ನಂದಲಾಲ್ ಬೋಸ್ ಕಾಗದ ಪತ್ರಗಳ ಕಟ್ಟನ್ನು ಬಿಚ್ಚಿ ತೋರಿಸಿದರು. ಅವು ಕಾಗದಪತ್ರಗಳ ಬದಲು ಚಿತ್ರಗಳಾಗಿದ್ದವು. ಅಬನೀಂದ್ರನಾಥ ಠಾಕೂರರಲ್ಲದೆ ಹ್ಯಾವೆಲ್, ಲಾಲಾ ಈಶ್ವರಿ ಪ್ರಸಾದ್ ಆ ಚಿತ್ರಗಳನ್ನು ಅವಲೋಕಿಸಿದರು. ಕೆಲವು ಐರೋಪ್ಯ ಚಿತ್ರಗಳ ಪ್ರತಿಗಳು. ಸ್ವತಂತ್ರ ಕೃತಿಗಳಲ್ಲಿ ’ಮಹಾಶ್ವೇತೆ’ ಹ್ಯಾವೆಲ್ಲರ ಮೆಚ್ಚುಗೆ ಗಳಿಸಿತು. ಗಣೇಶ, ಲಾಲಾ ಈಶ್ವರಿ ಪ್ರಸಾದರನ್ನು ಮುಗ್ಧಗೊಳಿಸಿತು. ಈತನ ರೇಖೆಗಳನ್ನು ನೋಡಿ, ಆಗಲೇ ಪ್ರಬುದ್ಧತೆಯ ಲಕ್ಷಣಗಳು ಕಾಣಿಸುತ್ತವೆ’ ಎಂದರು. ಅಬನೀಂದ್ರನಾಥ ಠಾಕೂರರು ತಮ್ಮ ಭಾವಿ ಶಿಷ್ಯನನ್ನು ಕಂಡು ಸಂತೋಷಗೊಂಡರು. ನಂದಲಾಲ್ ಬೋಸರು ಅರಸುತ್ತಿದ್ದ ಮಾರ್ಗ ಅವರನ್ನು ಆಹ್ವಾನಿಸುತ್ತಿತ್ತು. ನಂದಲಾಲ್ ಬೋಸರರಿಗೆ ಇದ್ದುದು ಒಂದೇ ಯೋಚನೆ. ತಾವು ಆರಿಸಿದ ಮಾರ್ಗಕ್ಕೆ ಹಿರಿಯರು ಒಪ್ಪುವರೇ? ಮಾವನವರಾದ ಪ್ರಕಾಶಚಂದ್ರ ಪಾಲ್ ಸ್ವತಃ ಬಂದು ಅಬನೀಂದ್ರನಾಥ ಠಾಕೂರರನ್ನು ಕಂಡರು. ಅವರಿಗೆ ಇದ್ದ ಯೋಚನೆ, ಹೆಂಡತಿ ಮಕ್ಕಳನ್ನು ಸಾಕಲು ಇದರಿಂದ ವರಮಾನ ಬರುವುದೇ? ’ನೀವು ಚಿಂತಿಸಬೇಡಿ, ನಂದಲಾಲ್ ಬೋಸರ ಪೂರ್ಣ ಜವಾಬ್ದಾರಿ ನನಗಿರಲಿ’ ಎಂದು ಅಬನೀಂದ್ರನಾಥ ಠಾಕೂರರು ಆಶ್ವಾಸನೆ ನೀಡಿದರು.
ಅಬನೀಂದ್ರನಾಥ ಠಾಕೂರರು ಒಂದು ಮಾತನ್ನು ಹೇಳುತ್ತಿದ್ದರು. ಗುರುವಿನಿಂದ ಶಿಷ್ಯ ಕಲಾವಿದನಾಗುವುದಿಲ್ಲ. ಶಿಷ್ಯ ಕಲಾವಿದನಾಗಿ ಸ್ವತಃ ರೂಪುಗೊಳ್ಳುತ್ತಾನೆ. ಗಾಳಿ, ಬೆಳಕು, ನೀರು ಕೊಟ್ಟು ಸಸಿಯನ್ನು ಬೆಳೆಸುವಂತೆ ಗುರು ಶಿಷ್ಯನನ್ನು ಆರೈಕೆ ಮಾಡುತ್ತಾನೆ ಅಷ್ಟೆ. ಇಂಥ ಗುರುವಿನ ಆಶ್ರಯದಲ್ಲಿ ನಂದಲಾಲ್ ಬೋಸ್ ಕಲಾವಿದರಾಗಿ ಬೆಳೆದರು. ನಂದಲಾಲ್ ಬೋಸರ ಅಭ್ಯಾಸ ಕ್ರಮದಲ್ಲಿ ಅಬನೀಂದ್ರನಾಥ ಠಾಕೂರರು ವಿಶೇಷ ಆಸಕ್ತಿ ವಹಿಸಿದರು. ಪ್ರಾರಂಭದಲ್ಲಿ ಹರಿನಯನ ಬಾಬು ಹಾಗೂ ಲಾಲಾ ಈಶ್ವರಿ ಪ್ರಸಾದರು ಮಾರ್ಗದರ್ಶನ ಮಾಡಿದರು. ಆಮೇಲೆ ಅಬನೀಂದ್ರನಾಥ ಠಾಕೂರರೇ ಸ್ವತಃ ಶಿಷ್ಯನ ಮೇಲ್ವಿಚಾರಣೆ ವಹಿಸಿದರು. ಆಗ ಅವರಲ್ಲಿ ಕಲಿಯುತ್ತಿದ್ದುದು ನಂದಲಾಲ್ ಬೋಸರು ಮಾತ್ರ. ಆನಂತರ ಅವರ ಶಿಷ್ಯರಾದವರಲ್ಲಿ ಮುಂದೆ ಕನ್ನಡ ನಾಡಿನಲ್ಲಿ ಪ್ರಸಿದ್ಧರಾದ ಕೆ. ವೆಂಕಟಪ್ಪನವರೂ ಒಬ್ಬರು.
ನಂದಲಾಲ್ ಬೋಸರು ಐದು ವರ್ಷ ಕಾಲ ಶಿಷ್ಯ ವೃತ್ತಿಯಲ್ಲಿ ಕಳೆದರು. ತಿಂಗಳಿಗೆ ಹನ್ನೆರಡು ರೂಪಾಯಿ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು.ಅಬನೀಂದ್ರನಾಥ ಠಾಕೂರರು ಪಾಠ ಹೇಳುತ್ತಿದ್ದ ಕ್ರಮ ತುಂಬ ಸರಳ, ಅಪ್ಯಾಯಮಾನ. ಅವರು ಮಾತನಾಡುವಾಗ ಶಿಷ್ಯರು ಒಂದೇ ಮನಸ್ಸಿನಿಂದ ಕೇಳುತ್ತಿದ್ದರು. ’ತರಗತಿ’ಯ ನೀರಸ ವಾತಾವರಣಕ್ಕೆ ಅಲ್ಲಿ ಪ್ರವೇಶವಿರಲಿಲ್ಲ. ಭಾರತದ ಇತಿಹಾಸ, ಪುರಾಣ ಪುಣ್ಯ ಕಥೆಗಳು, ರಾಮಾಯಣ, ಮಹಾಭಾರತಗಳಿಗೆ ಬೋಧನ ಕ್ರಮದಲ್ಲಿ ವಿಶಿಷ್ಟ ಸ್ಥಾನವಿತ್ತು. ಬುದ್ಧನ ಕಥೆಗಳು ಚಿತ್ರಕಲಾವಿದರಿಗೆ ವಿಷಯಗಳನ್ನು ಒದಗಿಸುತ್ತಿದ್ದವು. ಬಾಣದಿಂದ ಗಾಯಗೊಂಡ ಹಂಸವನ್ನು ಸಿದ್ಧಾರ್ಥ ಸಂತೈಸುತ್ತಿರುವುದು, ದಶರಥನ ದುಃಖ, ಕಾಳಿ, ಸತ್ಯಭಾಮ, ಕೃಷ್ಣ ಶಿವನ ತಾಂಡವ ನೃತ್ಯ, ಭೀಷ್ಮ ಪ್ರತಿಜ್ಞೆ, ಗಾಂಧಾರಿ, ಧೃತರಾಷ್ಟ್ರ, ಸಂಜಯ ಇವು ನಂದಲಾಲ್ ಬೋಸರ ಕಲ್ಪನೆಯಿಂದ ಮೂಡಿದ ಕೆಲವು ಚಿತ್ರಗಳು. ’ಬೇತಾಳ ಪಂಚವಿಂಶತಿ’ಯಿಂದ ಸ್ಫೂರ್ತಿ ಪಡೆದ ಚಿತ್ರಗಳೂ ಇದ್ದವು. ಅವರ ’ಸತಿ’ ಎಂಬ ಮೆಚ್ಚುಗೆ ಪಡೆದ ಕೃತಿ.
ನಂದಲಾಲ್ ಬೋಸರಿಗೆ ಸೋದರಿ ನಿವೇದಿತಾ ಅವರಿಂದ ವಿಶೇಷ ಪ್ರೋತ್ಸಾಹ ದೊರೆಯಿತು. ಜಗದೀಶಚಂದ್ರ ಬೋಸರೊಡನೆ ಬಂದು ನಂದಲಾಲ್ ಬೋಸರ ಕೃತಿಗಳನ್ನು ನೋಡುವ ಸಂದರ್ಭ ಒದಗಿತು. ಮೆಚ್ಚುಗೆಯ ಜೊತೆಗೆ ನಂದಲಾಲ್ ಬೋಸರಿಗೆ ಸೋದರಿ ನಿವೇದಿತಾ ಅವರ ಸ್ನೇಹವೂ ದೊರೆಯಿತು. ಈ ಬಾಂಧವ್ಯ ಗಾಢವಾಗಿ ಆತ್ಮೀಯವಾಗಿ ಬೆಳೆಯಿತು. ನಂದಲಾಲ್ ಬೋಸರು ಕುಂಚದಲ್ಲಿ ಚಿತ್ರವನ್ನು ಬಿಡಿಸುವಂತೆ ಲೇಖನಿಯಲ್ಲೂ ಬಿಡಿಸಬಲ್ಲವರಾಗಿದ್ದರು. ಅವರ ಮೇಲೆ ತುಂಬಾ ಪ್ರಭಾವ ಬೀರಿದ ಸೋದರಿ ನಿವೇದಿತಾ ಅವರು ನಿಧನರಾದಾಗ ಅವರು ಆಡಿದ ಈ ಮಾತುಗಳು ಬಣ್ಣಗಳೊಡನೆ ಪ್ರತಿಸ್ಪರ್ಧೆ ನಡೆಸುವಂತಿವೆ. ’ಆಕೆಯ ಮುಖದಲ್ಲಿ ಅಪೂರ್ವ ಕರುಣೆಯ ಭಾವವಿತ್ತು. ಶುಭ್ರತೆ ಹಾಗೂ ಸದೃಢತೆಯ ಕಾಂತಿ ಇತ್ತು. ಯಾರೇ ಆಗಲಿ, ಒಮ್ಮೆ ನೋಡಿದರೆ ಬದುಕಿರುವವರೆಗೆ ಮರೆಯಲಾಗದಂತಹ ಮುಖ. ಆಕೆ ನನಗೆ ನೀಡಿದ ಪ್ರೋತ್ಸಾಹದ ಬಗ್ಗೆ ಎಷ್ಟು ಹೇಳಿದರೂ ಸ್ವಲ್ಪವೇ. ಆಕೆಯ ಅಗಲಿಕೆ ನನ್ನ ಪಾಲಿಗೆ ಮಾರ್ಗದರ್ಶನ ನೀಡುತ್ತಿದ್ದ ದೇವತೆಯ ಅಗಲಿಕೆ. ನನಗೆ ರಾಮಕೃಷ್ಣ, ವಿವೇಕಾನಂದ, ವಿಚಾರ ಪರಿಚಯವಾದದ್ದು ಆಕೆಯ ಮೂಲಕ’.
ನಂದಲಾಲ್ ಬೋಸರು ಚಿತ್ರಕಲಾವಿದರು ಮಾತ್ರವಲ್ಲ, ಚಿತ್ರಕಲೆಯ ಪುನರುದಯದ ಇತಿಹಾಸದಲ್ಲಿ ಪಾಲುಗಾರರೂ ಹೌದು. ಆಧುನಿಕ ಭಾರತದ ಚಿತ್ರ ಕಲೆಯ ಬೆಳೆವಣಿಗೆಗೆ ಕಾರಣರಾದ ಚಿತ್ರಕಲಾವಿದರ ತಂಡದಲ್ಲಿ ನಂದಲಾಲ್ ಬೋಸರ ಜೊತೆಗೆ ಅಶಿತ್ ಕುಮಾರ್ ಹಾಲ್ದಾರ್, ಸುರೇಂದ್ರನಾಥ್ ಗಂಗೂಲಿ, ಸಮರೇಂದ್ರನಾಥ್ ಗುಪ್ತ, ಕ್ಷಿತೀಂದ್ರನಾಥ್ ಮಜುಂದಾರ್, ಸುರೇಂದ್ರನಾಥ್ ಕಾರ್, ಕೆ. ವೆಂಕಟಪ್ಪ, ಹಕೀಂ ಮಹಮ್ಮದ್ ಖಾನ್, ಶೈಲೇಂದ್ರನಾಥ್ ಡೇ, ದುರ್ಗಾಸಿಂಹ ಇದ್ದರು. ಇವರಿಗೆ ಸ್ಫೂರ್ತಿಯ ಕೇಂದ್ರ ಅಬನೀಂದ್ರನಾಥ ಠಾಕೂರ್. ನಂದಲಾಲ್ ಬೋಸರ ಪ್ರತಿಭೆ. ಸ್ವಂತ ಶೈಲಿಯನ್ನು ಗಗನೇಂದ್ರನಾಥ ಠಾಕೂರ್, ಆನಂದಕುಮಾರ ಸ್ವಾಮಿ, ಓ.ಸಿ. ಗಂಗೂಲಿ ಮೊದಲಾದ ಪ್ರಸಿದ್ಧ ಕಲಾವಿದರು, ಕಲಾವಿಮರ್ಶಕರು ಗುರುತಿಸಿದರು. ಚಿತ್ರಕಲೆಯ ಅಭಿವೃದ್ಧಿಗೆ ವಿಮರ್ಶಾತ್ಮಕ ದೃಷ್ಟಿಯ ಬೆಳವಣಿಗೆ ಅಗತ್ಯವೆಂದು ”ಇಂಡಿಯನ್ ಸೊಸೈಟಿ ಆಫ್ ಓರಿಯಂಟಲ್ ಆರ್ಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸುವುದರಲ್ಲಿ ಇವರು ಆಸಕ್ತಿ ವಹಿಸಿದರು. ಅದರ ಆಶ್ರಯದಲ್ಲಿ ನಡೆದ ಪ್ರಥಮ ಚಿತ್ರಕಲಾ ಪ್ರದರ್ಶನದಲ್ಲಿ ನಂದಲಾಲ್ ಬೋಸರ ಕೃತಿಗೆ 500 ರೂಪಾಯಿಯ ಬಹುಮಾನ ದೊರೆಯಿತು. ಈ ಬಹುಮಾನವನ್ನು ದೇಶ ಪರ್ಯಟನಕ್ಕಾಗಿ ಉಪಯೋಗಿಸಿದರು. ಕಲಾವಿದ ಪ್ರಿಯನಾಥ್ ಸಿನ್ಹಾ (ಸ್ವಾಮಿ ವಿವೇಕಾನಂದರ ಸ್ನೇಹಿತ) ಅವರ ಜೊತೆ ನಂದಲಾಲ್ ಬೋಸರು ಗಯಾ, ಬನಾರಸ್, ಆಗ್ರ, ದೆಹಲಿ, ಮಥುರ, ಬೃಂದಾವನಕ್ಕೆ ಪ್ರವಾಸ ಹೋದರು. ಆಮೇಲೆ ದಕ್ಷಿಣ ಭಾರತದ ಪ್ರವಾಸ ಕೈಗೊಂಡು ಗಂಗೂಲಿಯವರ ಜೊತೆ ಪುಣ್ಯಕ್ಷೇತ್ರಗಳಲ್ಲಿ ದೇವಸ್ಥಾನಗಳನ್ನು ನೋಡಿಕೊಂಡು ಬಂದರು. ಅವರ ಪಾಲಿಗೆ ಇದು ಜೀವನ ಹಾಗೂ ಕಲೆಯ ಅಭ್ಯಾಸವಾಗಿತ್ತು. ಈ ಯಾತ್ರೆಯ ಅನುಭವವನ್ನು ತಮ್ಮ ದಿನಚರಿ ಹಾಗೂ ಸ್ಕೆಚ್ ಬುಕ್ ನಲ್ಲಿ ಬರೆದಿಟ್ಟರು.
ಗವರ್ನಮೆಂಟ್ ಆರ್ಟ್ ಸ್ಕೂಲಿನಲ್ಲೇ ಉಪಾಧ್ಯಾಯರ ಕೆಲಸಕ್ಕೆ ಬಂದ ಆಹ್ವಾನವನ್ನು ನಂದಲಾಲ್ ಬೋಸರು ಒಪ್ಪಲಿಲ್ಲ. ಅಬನೀಂದ್ರನಾಥ ಠಾಕೂರರ ಅಪೇಕ್ಷೆಯಂತೆ ಅವರ ಮನೆಯಲ್ಲಿದ್ದ ಕಲಾಕೃತಿಗಳ ಸಂಗ್ರಹಕ್ಕೆ ಒಂದು ’ಕ್ಯಾಟಲಾಗ್’ ಸಿದ್ಧಪಡಿಸುವುದರಲ್ಲಿ ಸಹಾಯ ಮಾಡಿದರು. ಈ ಅಪೂರ್ವ ಸಂಗ್ರಹದಲ್ಲಿ ವಿವಿಧ ಶೈಲಿಗಳ ಚಿತ್ರಗಳಲ್ಲದೆ, ಶಿಲೆ ಹಾಗೂ ಲೋಹದ ಕಲಾಕೃತಿಗಳು, ದಂತದ ಕೆತ್ತನೆ ಕೃತಿಗಳು, ಭಾರತದ ನಾನಾ ಕಡೆಗಳಿಂದ ಶೇಖರಿಸಿದ ಬೊಂಬೆಗಳು, ಬಟ್ಟೆಗಳು, ನೇಪಾಳ, ಟಿಬೆಟ್ಟುಗಳಿಂದ ಸಂಗ್ರಹಿಸಿದ ಕಲಾಕೃತಿಗಳು ಇದ್ದವು. ಕೆಲವು ಹಳೆ ಚಿತ್ರಗಳನ್ನು ನಂದಲಾಲ್ ಬೋಸರು ಪ್ರತಿ ಮಾಡಿದರು.
ಅಬನೀಂದ್ರನಾಥ ಠಾಕೂರರ ಕಲಾಶಾಲೆ ಕೇವಲ ಕಲಾಶಾಲೆಯಾಗಿರದೆ ವಿವಿಧ ಚಟುವಟಿಕೆಗಳ ಕೇಂದ್ರವಾಗಿತ್ತು. ಶಾಸ್ತ್ರೀಯ ಹಾಗೂ ಜಾನಪದ ಕಲೆಗಳ ಅಭ್ಯಾಸದ ಜೊತೆಗೆ ವಾಚನ, ಚರ್ಚೆ ನಡೆಯುತ್ತಿದ್ದವು. ಕಲೆ, ಸೌಂದರ್ಯಗಳ ಆಸ್ವಾದನೆಯನ್ನು ವಿಸ್ತಾರಗೊಳಿಸುವುದು, ಆಳಗೊಳಿಸುವುದು, ಮೌಲ್ಯಗಳನ್ನು ಕಂಡುಕೊಳ್ಳುವುದು ಉದ್ದೇಶವಾಗಿತ್ತು. ಭಾರತೀಯ ಚಿತ್ರಕಲೆಯ ಇತಿಹಾಸದಲ್ಲಿ ಪ್ರಮುಖವಾದ ಒಂದು ಘಟನೆ 1907ರಲ್ಲಿ ನಡೆಯಿತು. ಹ್ಯಾವೆಲ್, ಸರ್ ಜಾನ್, ಉಡ್ ರಾಫ್, ಸೋದರಿ ನಿವೇದಿತಾ, ಅಬನೀಂದ್ರನಾಥ ಠಾಕೂರ್, ಗಗನೇಂದ್ರನಾಥ ಠಾಕೂರ್ ಮೊದಲಾದವರ ಪ್ರಯತ್ನದ ಫಲವಾಗಿ ಇಂಡಿಯನ್ ಸೊಸೈಟಿ ಆಫ್ ಓರಿಯಂಟಲ್ ಆರ್ಟ್ಸ್ ಪ್ರಾರಂಭವಾಯಿತು. ಈ ಸಂಸ್ಥೆಯೊಡನೆ ನಂದಲಾಲ್ ಬೋಸರು ನಿಕಟ ಸಂಪರ್ಕ ಹೊಂದಿದ್ದರು. ಈ ಸಂಸ್ಥೆಯ ಉದ್ದೇಶಗಳು ಬಹುಮುಖವಾಗಿದ್ದವು. ಜನರಲ್ಲಿ ಕಲಾಭಿರುಚಿಯನ್ನು ಉಂಟುಮಾಡುವುದು, ಅದಕ್ಕಾಗಿ ಕಲಾ ಪ್ರದರ್ಶನಗಳನ್ನೇರ್ಪಡಿಸುವುದು, ಕಲಾವಿದರಿಗೆ ನೆರವಾಗುವುದು, ಇವು ಕೆಲವು ಉದ್ದೇಶಗಳು. ನಂದಲಾಲ್ ಬೋಸರ ಕಲಾಜೀವನ ಬಹುಮುಖವಾಗಿ ಬೆಳೆಯಿತು. ಇದು ಸಣ್ಣದು, ಇದು ದೊಡ್ಡದು ಎಂಬ ಭಾವನೆ ಅವರ ಬಳಿ ಸುಳಿಯುತ್ತಿರಲಿಲ್ಲ. ಅವರಿಗೆ ಇಂದ್ರಲೋಕದ ಅಶ್ವವೂ ಒಂದೇ, ಭೂಲೋಕದ ಆಡೂ ಒಂದೇ. ಗಾಂಧೀಜಿಗೆ ಪ್ರಿಯವಾದ ಆಡಿನ ಚಿತ್ರವನ್ನು ನಂದಲಾಲ್ ಬೋಸ್ ಬರೆದುದನ್ನು ಕಂಡು ರವೀಂದ್ರನಾಥ ಠಾಕೂರರು ಒಂದು ಕವನವನ್ನೇ ಬರೆದರು. ಅದರಲ್ಲಿ ’ಎಲೆ ಕುರುಬ, ಇದು ನೀನು ಕಾಯುವ ಆಡಲ್ಲೋ, ಇದೊಂದು ನೂತನ ಸೃಷ್ಟಿ’ ಎಂದರು. ಜನರಿಗಾಗಿ ಕಲೆ ಎಂಬುದು ಅವರ ದೃಷ್ಟಿ. ಒಮ್ಮೆ ಬಣಿಪುರಕ್ಕೆ ಹೋದಾಗ ಸಾಮಾನ್ಯ ಜನರೂ ತಮ್ಮ ಮನೆಗಳಲ್ಲಿ ಚಿತ್ರಗಳನ್ನು ಇಟ್ಟುಕೊಳ್ಳಲೆಂದು ನೂರಾರು ಚಿತ್ರಗಳನ್ನು ಬರೆದು ಒಂದು ಚಿತ್ರಕ್ಕೆ ನಾಲ್ಕಾಣೆಯಂತೆ ಹಂಚಿದರು. ಈ ಹುಚ್ಚನ್ನು ಕೇಳಿದ ಅಬನೀಂದ್ರನಾಥ ಠಾಕೂರರು ಬಣಿಪುರಕ್ಕೆ ಬಂದು, ಮಾರಾಟಕ್ಕಿದ ಚಿತ್ರಗಳ ರಾಶಿಯನ್ನೇ ಕೊಂಡು ಕೊಂಡರು. ನಂದಲಾಲ್ ಬೋಸರಲ್ಲಿ ರವೀಂದ್ರನಾಥ ಠಾಕೂರರಿಗೆ ತುಂಬ ಪ್ರೀತಿ. ’ನಂದ, ನೀನು ಯಾವಾಗ ಬರುತ್ತೀಯ?’ ಎಂದು ಪೀಡಿಸುತ್ತಿದ್ದರು. ಶಾಂತಿನಿಕೇತನದಲ್ಲಿ ವಿಶ್ವ ಭಾರತೀಯ ಕಲಾ ವಿಭಾಗವನ್ನು ನಂದಲಾಲ್ ಬೋಸರು ವಹಿಸಿಕೊಂಡಾಗ ರವೀಂದ್ರನಾಥ ಠಾಕೂರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆ ಸಂದರ್ಭಕ್ಕೆ ಒಂದು ಸ್ವಾಗತ ಗೀತೆಯನ್ನು ಬರೆದು ನಂದಲಾಲ್ ಬೋಸರನ್ನು ಗೌರವಿಸಿದರು. ನಂದಲಾಲ್ ಬೋಸರು ಅವರ ಶಿಷ್ಯರಿಗೆ ’ಮಾಸ್ತರ್ ಮಾಶಯ್’ ಆಗಿದ್ದರು. ತಮ್ಮ ಶಿಷ್ಯರಲ್ಲಿ ಪ್ರೀತಿ ಗೌರವಗಳನ್ನು ತೋರಿಸುತ್ತಿದ್ದರು. ಅವರವರ ರುಚಿಗಳಿಗೆ ತಕ್ಕಂತೆ ಬರೆಯಲು ಸ್ವಾತಂತ್ರ್ಯ, ಪ್ರೋತ್ಸಾಹ ನೀಡುತ್ತಿದ್ದರು. ಅವರ ನಿರ್ಮಲ ಜೀವನ, ಕಲೆಯಲ್ಲಿ ಶ್ರದ್ಧೆ, ಮೃದುವಾದ ಭಾಷೆ, ತಿಳಿ ಹಾಸ್ಯ, ಅನುಕಂಪ ನಂದಲಾಲ್ ಬೋಸರಿಗೆ ಶಿಷ್ಯರ ಹೃದಯಲ್ಲಿ ಸ್ಥಾನ ನೀಡಿತು. ನಂದಲಾಲರು ರಚಿಸಿದ ’ದಮಯಂತಿಯ ಸ್ವಯಂವರ’ ಚಿತ್ರವನ್ನು ನೋಡಿ ಅಬನೀಂದ್ರನಾಥ ಠಾಕೂರರು ಸ್ವಯಂವರ ಮಂಟಪದ ಗಂಧದ ಸುವಾಸನೆ ತೇಲಿ ಬರುತ್ತಿದೆ’ ಎಂದರು. ನಂದಲಾಲ್ ಬೋಸರ ಇನ್ನೊಂದು ಕೃತಿ ’ಅಗ್ನಿ’ ಯನ್ನು ನೋಡಿ ಜಪಾನಿ ಕಲಾವಿದ ಓಕಾಕುರ ಅದರಲ್ಲಿ ಬೆಂಕಿಯ ಶಾಖದ ವಿನಃ ಎಲ್ಲ ಇದೆ ಎಂದರು.
ನಂದಲಾಲ್ ಬೋಸರು ಅವಿರತವಾಗಿ ಚಿತ್ರರಚನೆಯಲ್ಲಿ ತೊಡಗಿದರು. ಒಮ್ಮೆ ರವೀಂದ್ರನಾಥ ಠಾಕೂರರೊಡನೆ ಅವರ ತೋಟದಲ್ಲಿ ಒಂದು ತಿಂಗಳು ಕಳೆದರು. ಚಳಿಗೆ ಪದ್ಮಾನದಿ ಹೆಪ್ಪುಗಟ್ಟಿತ್ತು. ಅಲ್ಲಿನ ದೃಶ್ಯಗಳನ್ನು ಚಿತ್ರಿಸಿದಷ್ಟೂ ನಂದಲಾಲ್ ಬೋಸರಿಗೆ ತೃಪ್ತಿ ಇಲ್ಲ. ಕಡೆಗೆ ಅವರ ಬಳಿ ಇದ್ದ ಕಾಗದವೆಲ್ಲ ಮುಗಿದು ಹೋಯಿತು. ಸೋದರಿ ನಿವೇದಿತಾ ಅವರ ಆನುಗ್ರಹದಿಂದ ಅಜಂತಾದ ಫ್ರೆಸ್ಕೋಗಳನ್ನು ಪ್ರತಿ ಮಾಡಿದರು. ಅವರೊಡನೆ ಸಹಾಯಕ್ಕೆ ಹೋದವರು ವೆಂಕಟಪ್ಪ, ಹಾಲ್ದಾರ್, ಸಮರೇಂದ್ರ ಗುಪ್ತ. ಆಮೇಲೆ ಗ್ವಾಲಿಯರ್ನಲ್ಲಿ ಬಾಗ್ ಗುಹೆಗಳ ಫ್ರೆಸ್ಕೋಗಳನ್ನು ಪ್ರತಿ ಮಾಡಿದರು. ಅವರ ಹೃದಯಕ್ಕೆ ಸಮೀಪವಾಗಿದ್ದ ಸಾರನಾರ್ಥ ಫ್ರೆಸ್ಕೋಗಳನ್ನು ಪ್ರತಿ ಮಾಡುವ ಕೆಲಸ ಅವರು ಬೌದ್ಧರಲ್ಲವಾದ ಕಾರಣ ದೊರೆಯದೆ ಅವರಿಗೆ ತುಂಬ ದುಃಖವಾಯಿತು. ಜಗದೀಶಚಂದ್ರ ಬೋಸರು ಬಸು ವಿಜ್ಞಾನ ಮಂದಿರ ಹಾಗೂ ಚೀನಾ ಭವನಗಳಲ್ಲಿ ನಂದಲಾಲ್ ಬೋಸರು ಫ್ರೆಸ್ಕೋ ಮಾದರಿ ಚಿತ್ರಗಳನ್ನು ಬರೆದರು. ಫ್ರೆಸ್ಕೋ ಚಿತ್ರಗಳ ಕೆಲಸಕ್ಕೆ ಬರೋಡ ಸಂಸ್ಥಾನದ ಮಹಾರಾಜರು ನಂದಲಾಲ್ ಬೋಸರನ್ನು ಕರೆಸಿಕೊಂಡರು. ರವೀಂದ್ರನಾಥ ಠಾಕೂರರ ಕೃತಿಗಳಿಗೆ ನಂದಲಾಲ್ ಬೋಸರ ಚಿತ್ರಗಳನ್ನು ಬರೆದುಕೊಟ್ಟರು ’ಛಯನಿಕಾ’, ‘ಕ್ರೆಸೆಂಟ್’, ’ಗೀತಾಂಜಲಿ’, ‘ಫ್ರೂಟ್ ಗ್ಯಾದರಿಂಗ್’ – ಇವು ಅಂಥ ಕೃತಿಗಳಲ್ಲಿ ಕೆಲವು. ದೀಕ್ಷೆ ಎಂಬ ಚಿತ್ರದ ಬಗ್ಗೆ ರವೀಂದ್ರನಾಥ ಠಾಕೂರರು ಒಂದು ಕವನವನ್ನು ಬರೆದರು. ನಂದಲಾಲರು ರವೀಂದ್ರರ ನಾಟಕಗಳಿಗೆ ರಂಗ ಸಜ್ಜಿಕೆಯನ್ನೂ ಮಾಡುತ್ತಿದ್ದರು. ರವೀಂದ್ರನಾಥ ಠಾಕೂರರೊಡನೆ ನಂದಲಾಲ್ ಬೋಸರು ಚೀನಾ, ಜಪಾನ್, ಮಲಯ, ಬರ್ಮಾ ದೇಶಗಳಲ್ಲಿ 1924ರಲ್ಲಿ ಪ್ರವಾಸ ಮಾಡಿ ಬಂದರು. ಹತ್ತು ವರ್ಷಗಳ ತರುವಾಯ ಸಿಂಹಳಕ್ಕೆ (ಈಗಿನ ಶ್ರೀಲಂಕಾ) ರವೀಂದ್ರನಾಥ ಠಾಕೂರರೊಡನೆ ಭೇಟಿ ಇತ್ತರು. ನಂದಲಾಲ್ ಬೋಸರ ವಿದ್ವತ್ತು ಅಪಾರವಾದುದು. ಅವರ ಸಂಗವೇ ಒಂದು ವಿದ್ಯಾಭ್ಯಾಸ ಎಂದು ಅವರ ಗೆಳೆಯರೊಬ್ಬರು ಒಮ್ಮೆ ಹೇಳಿದರು. ಅವರ ವೀಕ್ಷಣೆ ತುಂಬ ತೀಕ್ಷ್ಣವಾಗಿತ್ತು. ಚೀನಾ ಪ್ರವಾಸದ ಸಮಯದಲ್ಲಿ ಭಾರತೀಯ ಸಂಗೀತ, ಚಿತ್ರಕಲೆಗಳಿಗೂ ಹಾಗೂ ಚೀನೀಯ ಸಂಗೀತ, ಚಿತ್ರಕಲೆಗಳಿಗೂ ಇರುವ ಸಾಮನ್ಯ, ಪ್ರಭಾವಗಳನ್ನು ಗುರುತಿಸಿದರು. ಅಷ್ಟೇ ಅಲ್ಲ, ಅಲ್ಲಿ ಒಂದು ಬೆಟ್ಟವನ್ನು ನೋಡಿ, ಅಂಥದೇ ಬೆಟ್ಟ ಬಿಹಾರ್ನಲ್ಲಿರುವುದನ್ನು ನೆನಪು ಮಾಡಿಕೊಟ್ಟರು. ಗಾಂಧೀಜಿಗೂ ನಂದಲಾಲ್ ಬೋಸರಿಗೂ ಗಾಢವಾದ ಸ್ನೇಹವಿತ್ತು. ಸೇವಾಗ್ರಾಮದಲ್ಲಿ ಗಾಂಧೀಜಿಯವರ ಆಶ್ರಮದ ಗೋಡೆಯ ಮೇಲೆ ನಂದಲಾಲ್ ಬೋಸರುಒಂದು ಚಿತ್ರ ಈಗಲೂ ಉಂಟು. ಬಿಂಬಸಾರನ ಯಜ್ಞಕ್ಕೆ ಬಲಿಯಾಗಿ ತೆಗೆದುಕೊಂಡು ಹೋಗುತ್ತಿದ್ದ ಕುರಿಯನ್ನು ಬುದ್ಧ ಎತ್ತಿಕೊಂಡಿರುವುದನ್ನು ಆ ಚಿತ್ರ ತೋರಿಸುತ್ತದೆ.
’ನನಗೆ ಸಂತ ತುಕಾರಾಮರ ಚಿತ್ರವನ್ನು ಬರೆದು ಕೊಡಿ’ ಎಂದು ಕೇಳಿ ಗಾಂಧೀಜಿ ನಂದಲಾಲ್ ಬೋಸರಿಂದ ಆಚಿತ್ರವನ್ನುಬರೆಯಿಸಿಕೊಂಡರು.ಗಾಂಧೀಜಿಯವರ ಜೀವನಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ನಂದಲಾಲರು ಬರೆದರು. ಚಾರಿತ್ರಿಕ ದಂಡಿ ಯಾತ್ರೆಯ ಸಂದರ್ಭದಲ್ಲಿ ಒಂದು ಚಿತ್ರವನ್ನು ಬರೆದರು. ಶಾಂತಿನಿಕೇತನಕ್ಕೆ ಗಾಂಧೀಜಿ ಭೇಟಿ ಇತ್ತ ಸಂದರ್ಭದಲ್ಲಿ ಗಾಂಧೀಜಿ ಪ್ರಾರ್ಥನಾ ಸಭೆಯಲ್ಲಿ, ಶಿಲುಬೆಯನ್ನು ಹೊತ್ತ ಕ್ರೈಸ್ತ, ಶ್ರೀ ದುರ್ಗಾ ರಚಿಸಿದರು. ಒಮ್ಮೆ ಗಾಂಧೀಜಿಯವರೊಡನೆ ನಂದಲಾಲ್ ಬೋಸರು ತೀಕಲ್ ಸಮುದ್ರ ದಂಡೆಯಲ್ಲಿ ವಿಹಾರಕ್ಕಾಗಿ ಹೋದರು. ಆಗ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ನಂದಲಾಲ್ ಬೋಸರು ಬಿಟ್ಟುಹೋಗಿದ್ದ ಬೂಟ್ಸು ಎಲ್ಲಿ ಕಳೆದುಹೋಗುವುವೋ ಎಂದು ಗಾಂಧೀಜಿ ಅವುಗಳನ್ನು ಕಾಯುತ್ತಾ ನಿಂತಿದ್ದರಂತೆ. ಅದರಿಂದ ನಾಚಿಕೆಯಾಗಿ, ಇನ್ನು ಮೇಲೆ ಬೂಟ್ಸ್ ಉಪಯೋಗಿಸುವುದಿಲ್ಲವೆಂದು ನಂದಲಾಲ್ ಬೋಸರು ಮನಸ್ಸು ಮಾಡಿದರು. ಇನ್ನೊಂದು ಘಟನೆ. ಚಿತ್ರ ಬರೆಯಲು ನಂದಲಾಲ್ ಬೋಸರ ಬಳಿ ಬಣ್ಣಗಳಿರಲಿಲ್ಲ. ಹತ್ತಿರ ಎಲ್ಲೂ ಸಿಕ್ಕುವ ಹಾಗೂ ಇರಲಿಲ್ಲ. ಆಗ ಗಾಂಧೀಜಿ ಹೇಳಿದರು ’ಇಲ್ಲಿಯ ಮಣ್ಣನ್ನೇ ಉಪಯೋಗಿಸಿ’ ಎಂದು. ವಿವಿಧ ಬಣ್ಣಗಳ ಮಣ್ಣನ್ನು ಉಪಯೋಗಿಸಿ ನಂದಲಾಲ್ ಬೋಸರು ಅಂಚೆಕಾರ್ಡುಗಳಲ್ಲಿ ಚಿತ್ರಗಳನ್ನು ಬರೆದರು. ಕಾಂಗ್ರೆಸ್ ಅಧಿವೇಶನಗಳನ್ನು ಆಕರ್ಷಕ ಮಾಡಲು ಗಾಂಧೀಜಿ ನಂದಲಾಲ್ ಬೋಸರಿಗೆ ಆಹ್ವಾನಿಸಿದರು. ಫೈಜ್ ಪುರ, ಲಕ್ನೋ, ಹರಿಪುರ ಕಾಂಗ್ರೆಸ್ ಅಧಿವೇಶನಗಳಲ್ಲಿ ನಂದಲಾಲ್ ಬೋಸರು ಮಂಟಪವನ್ನು ಅಲಂಕಾರ ಮಾಡಿದರು. ಹರಿಪುರದಲ್ಲಿ ಜನಜೀವನವನ್ನು ಪ್ರತಿಬಿಂಬಿಸುವ 83 ದೊಡ್ಡ ಚಿತ್ರಗಳನ್ನು ಬರೆದರು. ಇದಕ್ಕೆ ಸಿದ್ಧತೆಯಾಗಿ ಸುತ್ತಲ ಹಳ್ಳಿಗಳಿಗೆ ಹೋಗಿ ಜನಜೀವನದ ದೃಶ್ಯಗಳನ್ನು ಕಂಡು ಬಂದರು. ನಂದಲಾಲ್ ಬೋಸರು ಚಿತ್ರಕಲೆಗೆ ಉಪಯೋಗಿಸದೇ ಇದ್ದ ವಿಷಯಗಳಾಗಲೀ, ಸಾಧನಗಳಾಗಲೀ ಇಲ್ಲ. ರಾಮಾಯಣ, ಮಹಾಭಾರತ, ಸಂಸ್ಕೃತ ಕಾವ್ಯಗಳು, ಪುರಾಣಗಳು, ಬುದ್ಧ ಕ್ರಿಸ್ತ, ಗಾಂಧಿ ಮೊದಲಾದ ಸಂತರು, ಪ್ರಕೃತಿ ಜೀವನ, ಹೀಗೆ ರೇಷ್ಮೆ ಬಟ್ಟೆಗಳ ಮೇಲೆ ಚಿತ್ರ ಬರೆದರು. ನಾನಾ ಬಗೆಯ ವರ್ಣ ಮಾಧ್ಯಮಗಳನ್ನು ಉಪಯೋಗಿಸಿದರು. ಬ್ರಷ್ ಉಪಯೋಗಿಸುವಂತೆ ಬಟ್ಟೆ ತುಂಡುಗಳನ್ನು ಸಹ ಉಪಯೋಗಿಸಿದರು. ಚಿತ್ರಗಳ ಗಾತ್ರದಲ್ಲೂ ವೈವಿಧ್ಯ ತೋರಿದರು. ನಂದಲಾಲ್ ಬೋಸರಿಗೆ ಕಲಾವಿದರಿಗೆ ದೊರೆಯಬಹುದಾದ ಗೌರವಗಳೆಲ್ಲ ದೊರೆತವು. ಅಲಹಾಬಾದಿನಲ್ಲಿ ಏರ್ಪಟ್ಟ ಚಿತ್ರಕಲಾ ವಸ್ತು ಪ್ರದರ್ಶನದಲ್ಲಿ ಬೆಳ್ಳಿ ಪದಕವೂ, ತರುವಾಯ ಲಕ್ನೋದಲ್ಲಿ ಬಂಗಾರದ ಪದಕವೂ ದೊರೆಯಿತು.
ಭಾರತದ ಕೇಂದ್ರ ಲಲಿತಕಲಾ ಅಕಾಡೆಮಿ ನಂದಲಾಲ್ ಬೋಸರನ್ನು ’ಫೆಲೊಷಿಪ್’ ನೀಡಿ ಗೌರವಿಸಿತು. ಅನೇಕ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟೋರೇಟ್ ಪದವಿ ನೀಡಿದವು. ವಿಶ್ವಭಾರತಿ ವಿಶ್ವವಿದ್ಯಾನಿಲಯ ಅವರನ್ನು ’ದೇಶಿಕೋತ್ತಮ’ ಎಂಬ ಬಿರುದು ಕೊಟ್ಟು ಗೌರವಿಸಿತು. ಜವಾಹರಲಾಲ್ ನೆಹರೂ ಅವರು ನಂದಲಾಲ್ ಬೋಸರನ್ನು ಪದ್ಮ ಗೌರವ ಪ್ರಶಸ್ತಿಗಳಿಗೆ ಸೂಕ್ತವಾದ ಕಲಾತ್ಮಕ ರೂಪಗಳನ್ನು ಕೊಡಲು ಕೇಳಿದರು. 1956ರಲ್ಲಿ ನಂದಲಾಲ್ ಬೋಸರಿಗೆ ಪದ್ಮವಿಭೂಷಣ ಗೌರವ ಸಂದಿತು. ಚಿತ್ರಕಲೆಯನ್ನು ಕುರಿತು ಶಿಲ್ಪಚರ್ಚಾ ಎಂಬ ಶ್ರೇಷ್ಠ ಗ್ರಂಥವನ್ನು ಬೋಸರು ರಚಿಸಿದರು. ಕಲ್ಕತ್ತೆಯ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ನಂದಲಾಲ್ ಬೋಸರಿಗೆ ಸಿಲ್ವರ್ ಜೂಬಿಲಿ ಪದಕ ಕೊಟ್ಟು ಗೌರವಿಸಿತು. ರವೀಂದ್ರನಾಥ ಠಾಕೂರ ಜನ್ಮ ಶತಾಬ್ದಿಯ ಸ್ಮಾರಕ ಪದಕವನ್ನು ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ 1965ರಲ್ಲಿ ನೀಡಿ ನಂದಲಾಲ್ ಬೋಸರನ್ನು ಗೌರವಿಸಿತು. ನಂದಲಾಲ್ ಬೋಸರು ಕಡೆಯ ತನಕ ತಮ್ಮ ಸರಳತೆಯನ್ನು ನಯವಿನಯವನ್ನು ಕಳೆದುಕೊಳ್ಳಲಿಲ್ಲ. ವಿಶ್ವಭಾರತಿಯ ಪ್ರಾರ್ಥನಾ ಸಭೆಗೆ ಪ್ರತಿದಿನ ಬರುತ್ತಿದ್ದರು. ಆದರೆ ಅವರು ಕುಳಿತುಕೊಳ್ಳುತ್ತಿದ್ದುದು ಕಡೆಯ ಸಾಲಿನಲ್ಲಿ. 
ನಂದಲಾಲ್ ಬೋಸರು ಭಾರತೀಯ ಕಲಾ ಪ್ರಪಂಚದ ಕಾಮಧೇನು. ಕೇಳಿದವರಿಗೆ ಕೇಳಿದ್ದನ್ನು ಬರೆದು ಕೊಡುತ್ತಿದ್ದರು. ಅವರ ಕೀರ್ತಿಯಂತೆ ಅವರ ಕೃತಿಗಳೂ ಎಲ್ಲೆಲ್ಲೂ ಹರಡಿವೆ. ಕಳೆದು ಹೋದವೂ ಉಂಟು. ಒಮ್ಮೆ ಬಂಗಾಳಿ ಚಿತ್ರಕಲಾವಿದರ ಕೃತಿಗಳು ಲಂಡನ್ನಿಗೆ ಹಡಗಿನಲ್ಲಿ ಹೊರಟಾಗ, ಅದು ಮುಳುಗಿ ಆ ಕೃತಿಗಳೆಲ್ಲ ಸಮುದ್ರದ ಪಾಲಾದವು. ಅವುಗಳಲ್ಲಿ ನಂದಲಾಲ್ ಬೋಸರ ಕೆಲವು ಮೆಚ್ಚಿನ ಕೃತಿಗಳಿದ್ದವು. ಈ ನಷ್ಟ ಅವರಿಗೆ ಮರೆಯಲಾಗದ ನೋವೆನಿಸಿತು. ಅವರ ಪ್ರಸಿದ್ಧ ಕೃತಿ ’ಸತಿ’ ಜಪಾನಿನಲ್ಲಿ ಅಚ್ಚಾಗಿ ಖ್ಯಾತಿ ಗಳಿಸಿತು. ಪ್ರಾತಃಕಾಲವೆಂದರೆ ನಂದಾಲಾಲ್ ಬೋಸರಿಗೆ ತುಂಬ ಪ್ರೀತಿ. ಅವರ ಶಿಷ್ಯರಿಗೆ ಅವರು ಯಾವಾಗಲೂ ಹೇಳುತ್ತಿದ್ದ ಹಿತವಚನ. ’ನಿಮ್ಮ ಸ್ವಂತ ಕೃತಿ ರಚನೆಗೆ ಪ್ರಾತಃಕಾಲಕ್ಕಿಂತ ಒಳ್ಳೆಯ ಮುಹೂರ್ತವಿಲ್ಲ”. ನಂದಲಾಲ್ ಬೋಸರು ಬೆಳಗ್ಗೆ ಮೂರು ಗಂಟೆಗೆ ಏಳುತ್ತಿದ್ದರು. ಗೀತೆ ಮೊದಲಾದ ಗ್ರಂಥಗಳನ್ನು ಓದುತ್ತಿದ್ದರು. ಆಮೇಲೆ ಕೈಯಲ್ಲಿ ಒಂದು ಚೀಲ ಹಿಡಿದು ಬೆಳಗಿನ ವಿಹಾರಕ್ಕೆ ಹೊರಡುತ್ತಿದ್ದರು. ದಾರಿಯುದ್ದಕ್ಕೂ ಅವರ ಕಣ್ಣುಗಳು ಅರಸುತ್ತಿದ್ದವು. ’ಆಹಾ, ಈ ಕಲ್ಲು ಎಷ್ಟು ಚೆನ್ನಾಗಿದೆ. ಈ ಮಣಿ ಎಷ್ಟು ಚೆನ್ನಾಗಿದೆ!’ ಅವು ಚೀಲವನ್ನು ಸೇರುತ್ತಿದ್ದವು. ಅಂದವೆನಿಸಿದ ಸಣ್ಣ ಪುಟ್ಟ ವಸ್ತುಗಳನ್ನು ಸಣ್ಣ ಹುಡುಗನಂತೆ ಆರಿಸುತ್ತಿದ್ದರು. ಆ ಚೀಲಕ್ಕೆ ಲಕ್ಷ ರೂಪಾಯಿಯ ಚೀಲ ಎಂದು ಹೆಸರಿಟ್ಟಿದ್ದರು. ದಾರಿಯಲ್ಲಿ ಗಾಜಿನ ಚೂರೋ, ಮೊಳೆಯೋ ಬಿದ್ದಿದ್ದರೆ ಎಲ್ಲಿ ಮಕ್ಕಳ ಕಾಲಿಗೆ ಚುಚ್ಚುವುದೋ ಎಂದು ದೂರ ಎಸೆಯುತ್ತಿದ್ದರು. ಇಂಥ ವ್ಯಕ್ತಿಯ ಅಂತಃಕರಣ ಯಾರ ಹೃದಯವನ್ನು ತಾನೇ ತಾಗದು?
ನಂದಲಾಲ್ ಬೋಸರು ತಮ್ಮ 83ನೇ ವಯಸ್ಸಿನಲ್ಲಿ 1966ರ ಏಪ್ರಿಲ್ 16ರಂದು ನಿಧನರಾದರು. ಸಂಗೀತ ಮುಗಿದ ಮೇಲೂ ಅದರ ಮಾಧುರ್ಯ ಕಿವಿಯಲ್ಲಿ ಉಳಿಯುವಂತೆ, ನಂದಲಾಲ್ ಬೋಸರು ಚರಿತ್ರೆಗೆ ಸೇರಿದರೂ ಅವರ ವ್ಯಕ್ತಿತ್ವದ ಪರಿಮಳ ಉಳಿಯುತ್ತದೆ. ಅವರ ಸೃಷ್ಟಿಸಿದ ಅಪಾರ ಕಲಾರಾಶಿಯಿಂದ ಅವರು ಅಮರರಾಗಿದ್ದಾರೆ.

ಮಾಹಿತಿ ಆಧಾರ: ರಾಷ್ಟ್ರೋತ್ಥಾನದವರ ಕೃತಿ
--Tiru Sridhara


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img